ಆಗಸ್ಟ್ 31ಕ್ಕೆ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಿಗದಿ

ಕಾಂಗ್ರೆಸ್ -ಜೆಡಿಎಸ್ ಸಮನ್ವಯ ಸಮಿತಿ ಸಭೆ ಇದೇ ತಿಂಗಳ 31ರಂದು ನಿಗದಿಯಾಗಿದೆ. ಸಮನ್ವಯ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಸಮನ್ವಯ ಸಮಿತಿ ಸಭೆ ಇದೇ ತಿಂಗಳ 31ರಂದು ನಿಗದಿಯಾಗಿದೆ. ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿದೇಶಿ ಪ್ರವಾಸ ಕೈಗೊಳ್ಳುವುದರಿಂದ ಅದಕ್ಕೆ ಮೊದಲು ಸಮನ್ವಯ ಸಮಿತಿ ಸಭೆ ನಡೆಸಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ.

ಸಭೆಯಲ್ಲಿ ಮುಖ್ಯವಾಗಿ ಚರ್ಚೆಯಾಗಬೇಕಾದ ವಿಷಯಗಳನ್ನು ಪಟ್ಟಿ ಮಾಡುವಂತೆ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿಯವರಿಗೆ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಮ್ಮಿಶ್ರ ಸರ್ಕಾರದ ಮುಂದಿನ ಆದ್ಯತೆಯ ಕೆಲಸಗಳು, ನಾಯಕರ ನಡುವಿನ ಭಿನ್ನಾಭಿಪ್ರಾಯ ಮೊದಲಾದವುಗಳ ಕುರಿತು ಚರ್ಚಿಸಿ ಸರ್ಕಾರ ಸುಗಮವಾಗಿ ನಡೆದುಕೊಂಡು ಹೋಗುವಂತೆ ಮಾಡಲು ಸಮನ್ವಯ ಸಮಿತಿ ಸಭೆ ಕರೆಯಲಾಗುತ್ತದೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಶೀತಲ ಸಮರದಿಂದ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯುತ್ತಿಲ್ಲ ಎಂದು ಹೇಳಲಾಗುತ್ತಿತ್ತು.  ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆ ನಡೆಯಬೇಕು ಎಂದು ತೀರ್ಮಾನಿಸಲಾಗಿತ್ತಾದರೂ ಸಮ್ಮಿಶ್ರ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಎರಡು ಬಾರಿಯಷ್ಟೇ ಸಭೆ ನಡೆದಿದೆ. ಜುಲೈ 28 ಕ್ಕೆ ಸಮನ್ವಯ ಸಮಿತಿ ನಿಗದಿಯಾಗಿತ್ತಾದರೂ ಸಿಎಂ ಎಚ್‌.ಡಿ.ಕುಮಾರ ಸ್ವಾಮಿ ಪ್ರವಾಸದಲ್ಲಿದ್ದ ಕಾರಣ ಮುಂದೂಡಲ್ಪಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com