ಸಿದ್ದರಾಮಯ್ಯ
ರಾಜಕೀಯ
ಅನಂತಕುಮಾರ್ ಹೆಗಡೆ ಮಾನಸಿಕ ಅಸ್ವಸ್ಥ, ಕನಿಷ್ಠ ಸಂಸ್ಕಾರವೂ ಇಲ್ಲ: ಸಿದ್ದರಾಮಯ್ಯ
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಮಾನಸಿಕ ಅಸ್ವಸ್ಥ. ಅವರಿಗೆ ಕನಿಷ್ಠ ಸಂಸ್ಕಾರವೂ ಇಲ್ಲ. ಆತ ಮನುಕುಲಕ್ಕೆ ...
ಬಾಗಲಕೋಟೆ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ಮಾನಸಿಕ ಅಸ್ವಸ್ಥ. ಅವರಿಗೆ ಕನಿಷ್ಠ ಸಂಸ್ಕಾರವೂ ಇಲ್ಲ. ಆತ ಮನುಕುಲಕ್ಕೆ ಅವಮಾನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಬದಾಮಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, ಅನಂತ ಕುಮಾರ ಹೆಗಡೆಗೆ ಮನುಷ್ಯ ಭಾಷೆ ಗೊತ್ತಿಲ್ಲ. ಅವರಿಗೆ ನಾಚಿಕೆ ಆಗಬೇಕು. ಅಂತಹವರಿಗೆ ಕೇಂದ್ರ ಸಚಿವ ಸ್ಥಾನ ನೀಡಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿರುವ ಪ್ರಧಾನಿ ಮೋದಿಗೂ ಕೂಡ ಮಾನ ಮರ್ಯಾದೆ ಇಲ್ಲ. ಇಂಥವರಿಗೆ ಯಾವುದೇ ಕಾರಣಕ್ಕೂ ಮತ ಹಾಕಬೇಡಿ ಎಂದರು.
ಗಡ್ಡ ಬಿಟ್ಟವರು, ಬುರ್ಖಾ ಹಾಕಿಕೊಂಡವರು ನಮ್ಮ ಹತ್ತಿರ ಬರಬಾರದು ಎಂದು ಅನಂತಕುಮಾರ್ ಹೆಗಡೆ ಮತ್ತು ಬಸನಗೌಡ ಪಾಟೀಲ್ ಹೇಳುತ್ತಾರೆ. ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ಇವರು ಒಂದು ರೀತಿಯ ಕ್ಯಾನ್ಸರ್ ಇದ್ದಂತೆ. ಅವರ ಮಾತಿನ ಮೂಲಕ ದೇಶವನ್ನು ಹಾಳು ಮಾಡುತ್ತಾರೆ. ಬಿಜೆಪಿಯ ಅಪಪ್ರಚಾರದಿಂದ ನಾವು ಈ ಸೋಲುವಂತೆ ಆಯಿತು ಎಂದು ಹರಿಹಾಯ್ದರು.
ಬಿಜೆಪಿಯವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ನಾನು ಹಿಂದೂ ವಿರೋಧಿನಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಗಾಂಧೀಜಿ ಹಿಂದೂ-ಮುಸ್ಲಿಂ ಒಂದಾಗಿರಿ ಎಂದು ಹೇಳಿದ್ದರು. ಅವರನ್ನೇ ಬಿಜೆಪಿಯವರು ಕೊಂದುಬಿಟ್ಟರು. ಆದರೆ ಮಾತು ಮಾತ್ರ ಸಬ್ ಕಾ ಸಾತ್ ಸಬ್ ಕಾ ವಿಕಾಸ್. ಏನು ನಾಟಕ, ಏನು ಡೋಂಗಿತನ. ಎಲ್ಲವೂ ಸಬ್ ಕಾ ಸತ್ಯನಾಶ್ ಎಂದು ಲೇವಡಿ ಮಾಡಿದರು.
ಇದೇ ವೇಳೆ ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ವಿರುದ್ಧವೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬದಾಮಿ ಕ್ಷೇತ್ರ ನನಗೆ ಹೊಸದಾಗಿರಬಹುದು. ಆದರೆ ಇದು ನನ್ನ ಕ್ಷೇತ್ರ ನಾನು ಅಭಿವೃದ್ಧಿ ಮಾಡುತ್ತೇನೆ. ಇದೇ ರೀತಿ ಶ್ರೀರಾಮುಲು ಕೂಡ ಮೊಳಕಾಲ್ಮೂರಿನಲ್ಲಿ ಅಭಿವೃದ್ಧಿ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ