ಕುಮಾರಸ್ವಾಮಿ ಮತ್ತು ಪರಮೇಶ್ವರ್
ರಾಜಕೀಯ
ಸಂಪುಟ ವಿಸ್ತರಣೆ ನಂತರ ಬಂಡಾಯ: ಡ್ಯಾಮೇಜ್ ಕಂಟ್ರೋಲ್ ಗಾಗಿ ಅಖಾಡಕ್ಕಿಳಿದ ಸಿಎಂ, ಡಿಸಿಎಂ
ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮತ್ತು ಆಂತರಿಕ ಕಚ್ಚಾಟ ಹೆಚ್ಚಾಗಿದೆ, ರಮೇಶ್ ಜಾರಕಿಹೊಳಿ ಮತ್ತು ರಾಮಲಿಂಗಾ ರೆಡ್ಡಿ ಬಂಡಾಯ ಶಾಸಕರ ಮುಂದಾಳತ್ವ ವಹಿಸಿದ್ದಾರೆ...
ತುಮಕೂರು/ ಬಾಗಲಕೋಟೆ/ ವಿಜಯಾಪುರ: ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಮತ್ತು ಆಂತರಿಕ ಕಚ್ಚಾಟ ಹೆಚ್ಚಾಗಿದೆ, ರಮೇಶ್ ಜಾರಕಿಹೊಳಿ ಮತ್ತು ರಾಮಲಿಂಗಾ ರೆಡ್ಡಿ ಬಂಡಾಯ ಶಾಸಕರ ಮುಂದಾಳತ್ವ ವಹಿಸಿದ್ದಾರೆ, ಹೀಗಾಗಿ ಖುದ್ದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಸೋಮವಾರ ತುಮಕೂರಿನಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಜಿ, ಪರಮೇಶ್ವರ್, ತಾವು ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿ, ಯಾವುದೇ ತೀವ್ರತರವಾದ ನಿರ್ಧಾರ ಕೈಗೊಳ್ಳದಂತೆ ಮನವೊಲಿಸುವುದಾಗಿ ತಿಳಿಸಿದ್ದಾರೆ.
ರಮೇಶ್ ರಾಜಿನಾಮೆ ನೀಡಲಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಟಿ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ತಪ್ಪಿಸಿರುವುದಾಗಿ ನನ್ನ ಹಾಗೂ ಕೃಷ್ಣ ಭೈರೇಗೌಡರವರ ಬಗ್ಗೆ ಆರೋಪಗಳಿವೆ. ಇದು ಸತ್ಯಕ್ಕೆ ದೂರವಾದ ಮಾತು. ಪಕ್ಷದ ರಾಷ್ಟ್ರೀಯ ನಾಯಕರ ತೀರ್ಮಾನದಿಂದ ಪಕ್ಷ ಅಧಿಕಾರ ನಡೆಸುತ್ತಿದೆ. ಸಚಿವರ ಸ್ಥಾನಗಳನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ, ಸಂಪುಟ ವಿಸ್ತರಣೆ ನಂತರ ಕೆಲವು ನಾಯಕರಲ್ಲಿ ಅಸಮಾಧಾನ ಇರುವುದು ನಿಜ, ಆದರೆ ಅದಕ್ಕೆ ನನ್ನ ಹೆಸರು ಲಿಂಕ್ ಮಾಡುವುದು ,ಸರಿಯಲ್ಲ ಎಂದು ಹೇಳಿದ್ದಾರೆ.
ಇನ್ನೂ ಬಂಡಾಯಗಾರರು ಯಾವುದೇ ಸಮಾಧಾನಕ್ಕೂ ಬಗ್ಗದ ಕಾರಣ ಸ್ವತಃ ಸಿಎಂ ಕುಮಾರ ಸ್ವಾಮಿ ಅಖಾಡಕ್ಕಿಳಿದಿದ್ದಾರೆ, ರಾಮಲಿಂಗಾ ರೆಡ್ಡಿ ಮತ್ತು ರಮೇಶ್ ನನ್ನ ಆಪ್ತ ಸ್ನೇಹಿತರು. ಅವರ ಜೊತೆ ವಯಕ್ತಿಕವಾಗಿ ಮಾತನಾಡುವುದಾಗಿ ಹೇಳಿದ್ದಾರೆ, ಸಂಪುಟ ವಿಸ್ತರಣೆ ನಂತರ ಕೆಲವು ನಾಯಕರಲ್ಲಿ ಅಸಮಾಧಾನ ಮೂಡುವುದು ಸಹಜ ಎಂದು ತಿಳಿಸಿದ್ದಾರೆ.

