ಬಿಜೆಪಿ ಆತ್ಮವಿಶ್ವಾಸ ಕುಗ್ಗಿಸಿದ 2018ರ ವಿಧಾನಸಭೆ, ಲೋಕಸಭೆ ಉಪ ಚುನಾವಣೆಗಳು

2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸೇರಿದಂತೆ ಒಂಬತ್ತು ರಾಜ್ಯಗಳು ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದು...
ಎಚ್ ಡಿ ಕುಮಾರಸ್ವಾಮಿ, ಕಮಲ್ ನಾಥ್, ಅಶೋಕ್ ಗೆಹ್ಲೋಟ್
ಎಚ್ ಡಿ ಕುಮಾರಸ್ವಾಮಿ, ಕಮಲ್ ನಾಥ್, ಅಶೋಕ್ ಗೆಹ್ಲೋಟ್
2018ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸೇರಿದಂತೆ ಒಂಬತ್ತು ರಾಜ್ಯಗಳು ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದು, ಹಲವು ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯೂ ನಡೆದಿದೆ.
ಈ ಒಂಬತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಲೋಕಸಭಾ ಉಪ ಚುನಾವಣೆ ಆಡಳಿತರೂಢ ಎನ್ ಡಿಎ ಹಾಗೂ ಪ್ರತಿಪಕ್ಷ ಯುಪಿಎಗೆ ನಿರ್ಣಾಯಕವಾಗಿದ್ದು, 2019ರ ಮಹಾಸಮರಕ್ಕೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆಗಳು
ಫೆಬ್ರವರಿ 2018ರಲ್ಲಿ ಈಶಾನ್ಯದ ಮೂರು ರಾಜ್ಯಗಳಾದ ತ್ರಿಪುರ, ನಾಗಲ್ಯಾಂಡ್ ಮತ್ತು ಮೇಘಾಲಯದಲ್ಲಿ ವಿಧಾನಸಭೆ ಚುನಾವಣೆ ನಡೆಯಿತು. ತ್ರಿಪುರದಲ್ಲಿ ಬಿಪ್ಲಬ್ ಕುಮಾರ್ ದೇಬ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ, ಮೇಘಾಲಯದಲ್ಲಿ ಕೊನ್ರಾಡ್ ಸಂಗಮ ನೇತೃತ್ವದ ಎನ್ ಪಿಪಿ ಸರ್ಕಾರ ಹಾಗೂ ನಾಗಲ್ಯಾಂಡ್ ನಲ್ಲಿ ನೀಫಿಯು ರಿಯೊ ನೇತೃತ್ವದ ಎನ್ ಡಿಪಿಪಿ ಸರ್ಕಾರ ಅಧಿಕಾರಕ್ಕೆ ಬಂದಿತು.
ಈಶಾನ್ಯ ರಾಜ್ಯಗಳ ನಂತರ ಮೇ 12ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ತ್ರಿಶಂಕು ಸ್ಥಿತಿ ನಿರ್ಮಾಣವಾಯಿತು.
ಅತಂತ್ರ ಫಲಿತಾಂಶದಿಂದ ಕಂಗೆಟ್ಟ ಕಾಂಗ್ರೆಸ್ ಯಾವುದೇ ಷರತ್ತುಗಳಿಲ್ಲದೆ ಜೆಡಿಎಸ್ ಗೆ ಬೆಂಬಲ ನೀಡುವುದಾಗಿ ಘೋಷಿಸಿತು. ಈ ಮಧ್ಯೆ 104 ಸ್ಥಾನಗಳನ್ನು ಪಡೆಟುವ ಮೂಲಕ ಏಕೈಕ ಅತಿ ದೊಡ್ಡ ಪಕ್ಷವಾಗಿದ್ದ ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಆಹ್ವಾನ ನೀಡಿದರು. ಅದರಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದರು. ಆದರೆ ಬಹುಮತ ಸಾಬೀತು ಮಾಡಲು ಸಾಧ್ಯವಾಗದೇ ಒಂದೇ ದಿನಕ್ಕೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ 
ನಂತರ ಎಚ್ ಡಿಎಸ್ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸದರು. ಈ ಮೂಲಕ ವೈರಿಗಳಂತೆ ಗುದ್ದಾಡುತ್ತಿದ್ದ ಕಾಂಗ್ರೆಸ್ -ಜೆಡಿಎಸ್ ಒಟ್ಟಾಗಿ ಅಧಿಕಾರ ಹಂಚಿಕೊಂಡರು.
ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನಡೆದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಕೇಂದ್ರದ ಆಡಳಿತರೂಢ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿತು. ಪಂಚ ರಾಜ್ಯಗಳ ಪೈಕಿ ಮೂರು ರಾಜ್ಯಗಳಾದ ಮಧ್ಯಪ್ರದೇಶ. ರಾಜಸ್ಥಾನ ಹಾಗೂ ಛತ್ತಿಸಗಡದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಬಂದಿದೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಗೂ ಛತ್ತೀಸ್ ಗಢದಲ್ಲಿ ಭುಪೇಶ್ ಭಘೆಲ್ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. 
ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ವಿಧಾಸಭೆ ವಿಸರ್ಜಿಸಿದ್ದ ಟಿಆರ್ ಎಸ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು 86 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದರು.
ಇನ್ನು ಮಿಜೋರಾಂನಲ್ಲಿ ಆಡಳಿತರೂಢ ಕಾಂಗ್ರೆಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಎಂಎನ್ಎಫ್ ಜೋರಮಾತಂಗ್ ನೇತೃತ್ವದಲ್ಲಿ ಸರ್ಕಾರ ರಚಿಸಿದೆ.
ಲೋಕಸಭೆ ಉಪ ಚುನಾವಣೆ:
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ 2018ರ ಅವಧಿಯಲ್ಲಿ ಒಟ್ಟು 23 ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಈ  ಪೈಕಿ ಬಿಜೆಪಿ ಕೇವಲ 4ರಲ್ಲಿ ಮಾತ್ರ ಜಯ ಗಳಿಸಿದೆ.
ಉತ್ತರ ಪ್ರದೇಶದ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರವಾದ ಮುಖಭಂಗವಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಕ್ಷೇತ್ರ ಗೋರಖ್ ಪುರ, ಕೈರಾನಾ ಮತ್ತು ಫುಲ್ಪಪುರದಲ್ಲಿ ಬಿಜೆಪಿಗೆ ಭಾರಿ ಮುಖಭಂಗವಾಗಿತ್ತು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ಅವರ ಬಹುಜನ ಸಮಾಜ್ ಪಕ್ಷ ಮೈತ್ರಿಯೊಂದಿಗೆ ಈ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಮಕಾಡೆ ಮಲಗಿಸಿತ್ತು.
ಬಿಜೆಪಿ ಹಿಡಿತದಲ್ಲಿದ್ದ ಮಧ್ಯಪ್ರದೇಶದ ರಟ್ಲಮ್, ಪಂಜಾಬಿನ ಗುರ್ ದಾಸ್ ಪುರ್, ರಾಜಸ್ಥಾನದ ಆಜ್ಮೇರ್, ಅಳ್ವಾರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಸಿದುಕೊಂಡಿದೆ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ 5 ಉಪ ಚುನಾವಣೆ ಗೆದ್ದುಕೊಂಡಿದ್ದು, ಅಮೃತಸರ್ ಲೋಕಸಭಾ ಕ್ಷೇತ್ರವನ್ನು ಪುನಃ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲೂ ಬಿಜೆಪಿ ಮುಖಭಂಗ ಅನುಭವಿಸಿದ್ದು, ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ‌ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com