ರಾಜ್ಯ ಸರ್ಕಾರದಿಂದ 5 ಸಾವಿರ ಕೋಟಿ ಮೌಲ್ಯದ ಅಕ್ರಮ ಗಣಿಗಾರಿಕೆ: ಕುಮಾರಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದು, 5 ಸಾವಿರ ಕೋಟಿ ರುಪಾಯಿಗೂ ಹೆಚ್ಚು.....
ಎಚ್ ಡಿ ಕುಮಾಸ್ವಾಮಿ
ಎಚ್ ಡಿ ಕುಮಾಸ್ವಾಮಿ
Updated on
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದು, 5 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ  ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ 5,450 ಕೋಟಿ ರುಪಾಯಿ ಮೌಲ್ಯದ ಅಕ್ರಮ ಗಣಿಗಾರಿಕೆ ನಡೆದಿದೆ. ರಾಜ್ಯ ಸರ್ಕಾರದ ಒಡೆತನದ ಮೈಸೂರು ಮಿನರಲ್ಸ್‌ ಲಿಮೆಟೆಡ್(ಎಂಎಂಎಲ್‌) ಮೂಲಕ ಗಣಿಗಾರಿಕೆ ಗುತ್ತಿಗೆ ಪಡೆದಿರುವ ಕಂಪೆನಿಗಳು ಒಪ್ಪಂದದ ಪ್ರಕಾರ ವರ್ಷಕ್ಕೆ 30 ಲಕ್ಷ ಟನ್ ಅದಿರು ತೆಗೆಯಲು ಅನುಮತಿ ಪಡೆದಿವೆ. ಆದರೆ, 2014–15ರಿಂದ 2016–17ರವರೆಗೆ ಹೆಚ್ಚುವರಿಯಾಗಿ 60,56,440 ಟನ್ ಅದಿರು ತೆಗೆದು ಸಾಗಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ನಡೆಸಿದ ಆಂತರಿಕ ತನಿಖೆಯಿಂದಲೇ ಈ ಅಂಶ ಬಯಲಿಗೆ ಬಂದಿದೆ. ತನಿಖಾ ವರದಿಯ ಪ್ರತಿ ಪಡೆದುಕೊಂಡಿದ್ದೇನೆ. ಅದರಲ್ಲಿರುವ ಪ್ರಮುಖ 14 ಪುಟಗಳನ್ನು ಮಾತ್ರ ಬಿಡುಗಡೆ ನಾನು ಮಾಡುತ್ತಿದ್ದೇನೆ ಎಂದು ಹೇಳಿದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೆಪಮಾತ್ರಕ್ಕೆ ವಿನಯ ಕುಲಕರ್ಣಿ ಸಚಿವರಾಗಿದ್ದು, ಮುಖ್ಯಮಂತ್ರಿ ಕಾರ್ಯದರ್ಶಿಯಾಗಿರುವ ತುಷಾರ್ ಗಿರಿನಾಥ್ ಅವರೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಅಕ್ರಮಗಳಲ್ಲಿ ಅವರ ಪಾತ್ರವೂ ಇದೆ ಎಂದು ಕುಮಾರಸ್ವಾಮಿ ದೂರಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಯಡಿಯೂರಪ್ಪ ಚೆಕ್‌ನಲ್ಲಿ ಹಣ ಪಡೆದ ಕಾರಣಕ್ಕೆ ಆರೋಪಿ ಸ್ಥಾನದಲ್ಲಿ ನಿಂತಿದ್ದರು. ಸಿದ್ದರಾಮಯ್ಯ ಬುದ್ದಿವಂತರಿದ್ದು, ತಾವು ಸಿಕ್ಕಿಕೊಳ್ಳದಂತೆ ಎಚ್ಚರಿಕೆಯಿಂದ ಈ ಅಕ್ರಮಗಳನ್ನು ಮಾಡಿಸಿದ್ದಾರೆ ಎಂದು ಮಾಜಿ ಸಿಎಂ ವಾಗ್ದಾಳಿ ನಡೆಸಿದರು. 
ಈ ಹಿಂದಿನ ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ ಸಾಕ್ಷ್ಯಗಳ ಕೊರತೆಯಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿಲ್ಲ. ಇದರಿಂದ ನಿರಾಸೆಯಾಗಿರುವ ಕಾರಣ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಸಮಯ ವ್ಯರ್ಥ ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ. ಆದರೆ, ಮುಖ್ಯಮಂತ್ರಿ ನನ್ನನ್ನು ಹಿಟ್ ಅಂಡ್ ರನ್‌ ಎಂದು ಪದೇ ಪದೇ ಟೀಕಿಸುತ್ತಿದ್ದಾರೆ. ಕಿಕ್‌ಬ್ಯಾಕ್  ಪಡೆದು ಸುಮ್ಮನಾಗಿದ್ದೇನೆ ಎಂದು ಬಿಜೆಪಿ ಬೆಂಬಲಿಗರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಣಕುತ್ತಿದ್ದಾರೆ. ಹೀಗಾಗಿ ದಾಖಲೆಗಳ ಸಹಿತ ಆರೋಪ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com