ಬೆಂಗಳೂರು:ಗೋವಾ ವಿಧಾನಸಭೆ ಸ್ಪೀಕರ್ ನೇತೃತ್ವದ ತಂಡ ಬೆಳಗಾವಿ ಜಿಲ್ಲೆಯ ಕಣುಕಂಬಿ ಬಳಿ ಇರುವ ಕಳಸಾ-ಬಂಡೂರಿ ನಾಲಾ ಪ್ರದೇಶಕ್ಕೆ ಇಂದು ಭೇಟಿ ನೀಡಿ ವೀಕ್ಷಣೆ ಮಾಡಿದೆ. ಶಿಷ್ಟಾಚಾರ ಪ್ರಕಾರ ಅವರಿಗೆ ಸಹಕರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ನಿಯೋಗ ಬರುವ ಬಗ್ಗೆ ತಿಳಿಸಿರಲಿಲ್ಲ. ಅವರು ವೀಕ್ಷಣೆ ಮಾಡಿ ಹೋಗಲಿ. ಅಲ್ಲಿ ನಾವು ಯಾವುದೇ ಕಾಮಗಾರಿಯನ್ನು ಮುಂದುವರಿಸಿಲ್ಲ. ಕಾನೂನು ಉಲ್ಲಂಫಿಸಿಯೂ ಇಲ್ಲ್ಲ
ಎಂದು ತಿಳಿಸಿದರು.
ಹಿರಿಯ ನ್ಯಾಯವಾದಿ ಪಾಲಿ.ಎಸ್.ನಾರಿಮನ್ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಮಹದಾಯಿ ವಿಚಾರಣೆ ವೇಳೆ ನಾರಿಮನ್ ಅವರ ಬದಲಿಗೆ ಪರ್ಯಾಯ ನ್ಯಾಯವಾದಿ ರಾಜ್ಯದ ಪರವಾಗಿ ವಾದ ಮಂಡನೆ ಮಾಡಲಿದ್ದಾರೆ. ನಾರಿಮನ್ ಅವರೂ ಸಹ ತಂಡದಲ್ಲಿ
ಇರಲಿದ್ದು, ಅವರ ಸಲಹೆ ಪಡೆದುಕೊಂಡು ಮುಂದುವರಿಯುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಮಹದಾಯಿ ವಿವಾದ ವಿಚಾರ ಕುರಿತಂತೆ ವಿಳಂಬಕ್ಕೆ ಬಿಜೆಪಿ ನಾಯಕರೇ ಕಾರಣ, ಒಂದು ತಿಂಗಳಲ್ಲಿ ಮಹಾದಾಯಿ ನೀರನ್ನು ರಾಜ್ಯಕ್ಕೆ ಕೊಡಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಮಾತು ತಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ
ಟೀಕಿಸಿದ್ದಾರೆ.
ಮಹಾದಾಯಿ ವಿಚಾರ ಕುರಿತು ತುರ್ತು ಸಮಾಲೋಚನೆಗೆ ನಿನ್ನೆ ಸರ್ವ ಪಕ್ಷ ನಾಯಕರು ಮತ್ತು ರೈತರ ಮುಖಂಡರ ಸಭೆ ನಡೆಸಲಾಯಿತು. ಸರ್ವ ಪಕ್ಷ ನಾಯಕರ
ಸಭೆಯಲ್ಲಿ ಬಿಜೆಪಿ ನಾಯಕರ ನಿಲುವಿನಿಂದಾಗಿ ಸಹಮತ ಸಾಧ್ಯವಾಗಲಿಲ್ಲವಾದರೂ ರೈತ ಮುಖಂಡರ ಸಭೆ ವಿಫಲವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿವಾದ ಇತ್ಯರ್ಥಕ್ಕೆ ಮಧ್ಯೆ ಪ್ರವೇಶ ಮಾಡುವಂತೆ ಪ್ರಧಾನಿಮಂತ್ರಿಗಳ ಮನ ಒಲಿಸಲು ಸರ್ವಪಕ್ಷ ಹಾಗೂ ರೈತ ಮುಖಂಡರ ನಿಯೋಗವನ್ನು ಕರೆದೊಯ್ಯಬೇಕು ಎನ್ನುವ ಅಭಿಪ್ರಾಯ ಆ ಸಭೆಯಲ್ಲಿ ವ್ಯಕ್ತವಾಗಿದೆ. ಅದರಂತೆ ಪ್ರಧಾನಿ ಅವರಿಗೆ
ಪತ್ರ ಬರೆದು ಭೇಟಿಗೆ ಸಮಯ ಕೋರಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.