ನೀರಾವರಿ ಇಲಾಖೆಯಲ್ಲಿ 38 ಕೋಟಿ ರೂ. ಭ್ರಷ್ಟಾಚಾರ: ಪುಟ್ಟರಾಜು ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಶಾಸಕ

ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸಚಿವರ ವಿರುದ್ಧ ಆರೋಪ ಮಾಡುವ ಮೂಲಕ ದೋಸ್ತಿ ಪಕ್ಷ ಕಾಂಗ್ರೆಸ್ ವಿರೋಧ ಪಕ್ಷದ ಕೆಲಸ ಮಾಡಿತು. ಕಾಂಗ್ರೆಸ್ ....
ಸಿ,ಎಸ್ ಪುಟ್ಟರಾಜು
ಸಿ,ಎಸ್ ಪುಟ್ಟರಾಜು
ಬೆಂಗಳೂರು: ವಿಧಾನ ಪರಿಷತ್ ನಲ್ಲಿ  ಜೆಡಿಎಸ್ ಸಚಿವರ ವಿರುದ್ಧ ಆರೋಪ ಮಾಡುವ ಮೂಲಕ ದೋಸ್ತಿ ಪಕ್ಷ ಕಾಂಗ್ರೆಸ್ ವಿರೋಧ ಪಕ್ಷದ ಕೆಲಸ ಮಾಡಿತು. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು  ಪುಟ್ಟರಾಜು ವಿರುದ್ಧ ಹರಿಹಾಯ್ದರು.
ಜೆಡಿಎಸ್ ಸಚಿವ ಪುಟ್ಟರಾಜು ಅವರ ನೀರಾವರಿ ಇಲಾಖೆ ಭ್ರಷ್ಟ ಇಲಾಖೆ ಎಂದು ಆರೋಪಿಸಿದರು. ಸಣ್ಣ ನೀರಾವರಿ ಇಲಾಖೆಯಲ್ಲಿ ಕೊಪ್ಪಳದಲ್ಲಿ ಸುಮಾರು 38 ಕೋಟಿ ರೂ. ಭ್ರಷ್ಟಾಚಾರವಾಗಿದೆ ಎಂದು ಪುಟ್ಟರಾಜು ಗಮನಕ್ಕೆ ತಂದರು.
ಕೊಪ್ಪಳ ಮತ್ತು ರಾಯಚೂರುಗಳಲ್ಲಿ ನೀರಾವರಿ ಇಲಾಖೆಯಲ್ಲಿ 38 ಕೋಟಿ ರು ಅವ್ಯವಹಾರ ನಡೆದಿದೆ ಎಂದು ದೂರಿದರು, ಇದೇ ಅವಕಾಶವನ್ನ ಉಪಯೋಗಿಸಿಕೊಂಡ ವಿರೋಧ ಪಕ್ಷ  ಬಿಜೆಪಿ, ಈ ವಿಷಯ ಗಂಭೀರವಾಗಿದೆ. ಆಡಳಿತ ಪಕ್ಷದ ಸದಸ್ಯರೇ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದಾಗ ಮಾತಿನ ಚಕಮಕಿ ಆರಂಭವಾಯಿತು.
ಈ ವೇಳೆ ಮಾತನಾಡಿದ ಶರಣಪ್ಪ ನಾನೇ ಆರೋಪ ಮಾಡುತ್ತಿದ್ದೇನೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ನನಗೆ ಮಾತನಾಡಲು ಅವಕಾಶಕೊಡಿ ಎಂದು  ಹೇಳಿದರು. ನೀವು ಆಡಳಿತದಲ್ಲಿದ್ದೀರಾ, ನಿಮ್ಮ ಆರೋಪ ಗಂಭೀರವಾಗಿದೆ ಎಂದು ವೈ.ಎ.ನಾರಾಯಣಸ್ವಾಮಿ ಮತ್ತು ಪ್ರತಿ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮತ್ತೊಮ್ಮೆ ಹೇಳಿದಾಗ ಸಿಟ್ಟಾದ ಮಟ್ಟೂರು ಹೌದು, ನಾನೇ ಹೇಳುತ್ತಿದ್ದೇನೆ ಎಂದು ರೇಗಿ ನೀವು ಕುಳಿತುಕೊಳ್ಳಿ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. 
ಈ ವೇಳೆ ಮಧ್ಯ ಪ್ರವೇಶಿಸಿದ ಬಸವರಾಜ ಹೊರಟ್ಟಿ . ಯಾವ ಪಕ್ಷದವರು ಎಂಬುದು ಮುಖ್ಯವಲ್ಲ,ವಿಷಯ ಮುಖ್ಯ ಎಂದು ಹೇಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.
ಇನ್ನು ಇದೇ ವೇಳೆ ಮಾತನಾಡಿದ ಪುಟ್ಟರಾಜು, ಪ್ರಕರಣ  ಸಂಬಂಧ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ,  ನಾವು ಯಾವುದೇ ತಪ್ಪಿತಸ್ಥರನ್ನು ರಕ್ಷಿಸುವುದಿಲ್ಲ, ಮುಂದೆ ನಮ್ಮ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದಂತೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com