ಧರಂ ಸಿಂಗ್ ಸಾವಿಗೆ ನೀವೇ ಕಾರಣ, ನಂಬಿಕೆ ದ್ರೋಹ ನಿಮಗೆ ರಕ್ತಗತ: ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಸಾವಿಗೆ ಹೆಚ್ ಡಿ ಕುಮಾರಸ್ವಾಮಿ ಕಾರಣ, ನಂಬಿಕೆ ದ್ರೋಹ ನಿಮಗೆ ರಕ್ತಗತವಾಗಿದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರತಿಪಕ್ಷ ನಾಯಕ, ಮಾಜಿ ಸಿಎಂ....
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಸಾವಿಗೆ ಹೆಚ್ ಡಿ ಕುಮಾರಸ್ವಾಮಿ ಕಾರಣ, ನಂಬಿಕೆ ದ್ರೋಹ ನಿಮಗೆ ರಕ್ತಗತವಾಗಿದೆ ಎಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಜು.09 ರಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು, ರೈತರ ಸಾಲ ಮನ್ನಾ, ಬಜೆಟ್ ಸೇರಿದಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಹಿಂದಿನ ಘಟನೆಗಳನ್ನೂ ಯಡಿಯೂರಪ್ಪ ಪ್ರಸ್ತಾಪಿಸಿದ್ದಾರೆ. ಭಾಷಣದಲ್ಲಿ ಸಿಎಂ ಹೆಚ್ ಡಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯಡಿಯೂರಪ್ಪ, ರೈತರ ಸಾಲ ಮನ್ನಾ ವಿಷಯ, ರಾಜಕೀಯದಲ್ಲೂ ನೀವು ದ್ರೋಹ ಮಾಡಿದ್ದೀರ. ನಂಬಿಕೆ ದ್ರೋಹ ಮಾಡುವುದು ನಿಮಗೆ ರಕ್ತಗತವಾಗಿದೆ ಎಂದು ಆರೋಪಿಸಿದ್ದಾರೆ. 
ಇದೇ ವೇಳೆ ಮಾಜಿ ಸಿಎಂ ಧರಂ ಸಿಂಗ್ ಅವರ ಬಗ್ಗೆಯೂ ಯಡಿಯೂರಪ್ಪ ಮಾತನಾಡಿದ್ದು, ಧರಂ ಸಿಂಗ್ ಸಾವಿಗೆ ನೀವೇ ಕಾರಣ, ಮುಖ್ಯಮಂತ್ರಿಯಾಗುವುದಕ್ಕಾಗಿ ನೀವು ಕಾಂಗ್ರೆಸ್ ಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಿರಿ, ಅಧಿಕಾರ ಕಳೆದುಕೊಂದ ನೋವಿನಲ್ಲೇ ಧರಂ ಸಿಂಗ್ ಸಾವನ್ನಪ್ಪಿದರು, ನಂತರ ಬಿಜೆಪಿ-ಜೆಡಿಎಸ್ ಸರ್ಕಾರದಲ್ಲಿ ಎಲ್ಲಾ ನೋವುಗಳನ್ನು ಸಹಿಸಿಕೊಂಡು ನಾನು ಹಣಕಾಸು ಸಚಿವನಾಗಿ, ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದೆ. ನೀವು ಸಿಎಂ ಆಗಿ ಅಧಿಕಾರ ನಡೆಸಲು ಬಿಜೆಪಿ ಹಾಗೂ ಬಿಎಸ್ ವೈ ಕಾರಣ. ಆದರೆ 20 ತಿಂಗಳ ನಂತರ ಅಧಿಕಾರ ಹಸ್ತಾಂತರ ಮಾಡುವುದರಲ್ಲಿ ಗೊಂದಲ ಉಂಟು ಮಾಡಿ ನಂಬಿಕೆ ದ್ರೋಹ ಮಾಡಿದ್ದಿರಿ, ನಂಬಿಕೆ ದ್ರೋಹ ಮಾಡುವುದು ನಿಮಗೆ ರಕ್ತಗತವಾಗಿದೆ ಎಂದು ಹೇಳಿದ್ದಾರೆ. 
ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಕುಮಾರಸ್ವಾಮಿ ನನ್ನ ರಕ್ತದ ಬಗ್ಗೆ ಮಾತನಾಡುವುದು ಅಸಾಂವಿಧಾನಿಕ ಪದವಲ್ಲವೇ? ನಾಲಿಗೆಗೆ ಎಲುಬಿಲ್ಲ ಎಂದು ಏನೇನೋ ಮಾತನಾಡಬೇಡಿ ಎಂದು ಹೇಳಿದರು. ಈ ವೇಳೆ ಜೆಡಿಎಸ್ ನ ಶಾಸಕರು ಯಡಿಯೂರಪ್ಪ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಿಧಾನಸಭೆಯಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com