ಎಐಸಿಸಿ ನಮಗೆ ದೇವಸ್ಥಾನವಿದ್ದಂತೆ, ಸುಖಾ ಸುಮ್ಮನೆ ಆರೋಪ ಸರಿಯಲ್ಲ: ಡಿಕೆಶಿ

ಕಾಂಗ್ರೆಸ್ ಸರ್ಕಾರ 50 ಕೋಟಿ ರು. ಹಣವನ್ನು ಎಐಸಿಸಿಗೆ ಫಂಡ್ ನೀಡಿದೆ ಎಂದು ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಆರೋಪಿಸಿದ್ದಾರೆ. ..
ರಾಮದಾಸ್
ರಾಮದಾಸ್
ಬೆಂಗಳೂರು: ಕಾಂಗ್ರೆಸ್ ಸರ್ಕಾರ 50 ಕೋಟಿ ರು. ಹಣವನ್ನು ಎಐಸಿಸಿಗೆ ಫಂಡ್ ನೀಡಿದೆ ಎಂದು ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಆರೋಪಿಸಿದ್ದಾರೆ. 
ಇದೇ ವೇಳೆ ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆ ಹಾಗೂ ವ್ಯಕ್ತಿ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುವಂತಿಲ್ಲ. ಹಾಗಾಗಿ ಆರೋಪವನ್ನು ಕಡತದಿಂದ ತೆಗೆಸಿ ಹಾಕಲು ಮುಂದಾದರು. ಇದಕ್ಕೆ ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಾರಿಂದ ಲಂಚ ಪಡೆದ್ರು? ಎಐಸಿಸಿಗೆ 50 ಕೋಟಿ ರೂ. ಕಿಕ್ ಬ್ಯಾಕ್ ಹೇಗೆ ಹೋಯ್ತು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳಿವೆ. ದಾಖಲೆ ಕೊಡಲು ಸಿದ್ಧವಿರುವುದಾಗಿ ಹೇಳಿದರು.
ವಿಧಾನಸಭೆಯಲ್ಲಿ ರಾಮದಾಸ್ ಅವರ ಹೇಳಿಕೆಗೆ ಕಾಂಗ್ರೆಸ್ಸಿನಿಂದ ಭಾರೀ ಆಕ್ಷೇಪ ವ್ಯಕ್ತವಾಯಿತು.
ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಯಾವುದೇ ದಾಖಲೆಗಳಿಲ್ಲದೇ ಕಾಂಗ್ರೆಸ್ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ನಮಗೆ ಎಐಸಿಸಿ ದೇವಸ್ಥಾನ ಇದ್ದಂತೆ  ಯಾರೋಬ್ಬರು ಸುಖಾ ಸುಮ್ಮನೆ ಆರೋಪಮ ಮಾಡಿದರೇ ನಾವು ಸಹಿಸುವುದಿಲ್ಲ. ಈ ಮೊದಲು ಯಾರಾದರೂ ಎಐಸಿಸಿ ಬಗ್ಗೆ ಯಾವುದಾದರೂ ಆರೋಪ ಮಾಡಿದ್ದಾರಾ? ಎಂದು ಪ್ರಶ್ನಿಸಿದರು. 
ಎಐಸಿಸಿ ಎಂದರೆ ಒಂದು ಸಂಸ್ಥೆ. ಅಧ್ಯಕ್ಷರು ಪದಾಧಿಕಾರಿಗಳು ಇದ್ದಾರೆ. ಹಾಗಾಗಿ ಎಐಸಿಸಿ ಮೇಲೆ ಆರೋಪ ಮಾಡಿದರೇ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ. ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ. ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಸಚಿವ ಕೃಷ್ಣ ಬೈರೆಗೌಡ ಒತ್ತಾಯಿಸಿದರು.
ಆಗ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಕ್ಷೇಪಣೆ ವ್ಯಕ್ತಪಡಿಸಿ, ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ಧ ಆರೋಪಿಸಿಲ್ಲ. ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು ತಿರುಗೇಟು ನೀಡಿದರು.
ಇದಕ್ಕೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಮ್ಮಲ್ಲಿರುವ ದಾಖಲೆಗಳನ್ನು ಕಾರ್ಯದರ್ಶಿ ಯವರಿಗೆ ಒಪ್ಪಿಸಿ, ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬನ್ನಿ ಎಂದು ಸೂಚಿಸಿದರು. 
ಆದರೆ ರಾಮದಾಸ್ ಇದಕ್ಕೆ ಒಪ್ಪದೆ, ಮೊದಲು ಚರ್ಚೆ ಆಗಲಿ, ನ್ಯಾಯಾಂಗ ತನಿಖೆಗೆ ಆದೇಶಿಸಿ. ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದು ಪಟ್ಟು ಹಿಡಿದರು.  ಈ ವೇಳೆ ಸದನದಲ್ಲಿ ಗದ್ದಲ, ಜಟಾಪಟಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸದನವನ್ನ ಮುಂದೂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com