ಕೃಷ್ಣಾ ನದಿ ಯೋಜನೆಗೆ ಹಣ: ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ

ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಸೇರಿದಂತೆ ನೀರಾವರಿ ಯೋಜನೆಗಳಿಗೆ ...
ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ ಸೇರಿದಂತೆ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಿಂದಿನ ಕಾಂಗ್ರೆಸ್ ಸರ್ಕಾರದ ಹಣ ವಿನಿಯೋಗ ಕುರಿತು ನಿನ್ನೆ ವಿಧಾನಸಭೆಯಲ್ಲಿ ತೀವ್ರ ಚರ್ಚೆ, ಕೋಲಾಹಲ ನಡೆದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೀವ್ರ ಸಿಟ್ಟುಗೊಂಡ ಪ್ರಸಂಗ ನಡೆಯಿತು.

ನಿನ್ನೆ ಬಜೆಟ್ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಬಸವನಗೌಡ ಪಾಟೀಲ್ ಯತ್ನಾಳ್, ಕೃಷ್ಣಾ ನದಿ ಕೊಳ್ಳದ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂಪಾಯಿಗಳಂತೆ 5 ವರ್ಷ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಖರ್ಚು ಮಾಡಿದ್ದು ಕೇವಲ 8 ಸಾವಿರ ಮಾತ್ರ ಎಂದು ಆರೋಪಿಸಿದರು. 2013ರ ಕಾಂಗ್ರೆಸ್ ಚುನಾವಣಾಪೂರ್ವ ಪ್ರಣಾಳಿಕೆಯಲ್ಲಿ ಕೂಡ ಇದೇ ಭರವಸೆಯನ್ನು ನೀಡಲಾಗಿತ್ತು ಎಂದರು. ಇದು ಸಿದ್ದರಾಮಯ್ಯನವರನ್ನು ಕೆರಳಿಸಿತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ, ತಾವು 5 ವರ್ಷದಲ್ಲಿ 50 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಕೃಷ್ಣಾ ನದಿ ಕೊಳ್ಳದ ಯೋಜನೆಗಳಿಗೆ ಮಾತ್ರ ಹೇಳಿರಲಿಲ್ಲ. ಇಡೀ ರಾಜ್ಯದ ಒಟ್ಟಾರೆ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ 10 ಸಾವಿರ ಕೋಟಿ ರೂಪಾಯಿಗಳಂತೆ 50 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು ಎಂದು ಹೇಳಿದ್ದೆ ಎಂದರು.

ಆಗ ಯತ್ನಾಳ್ 2013ರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಓದಲು ಆರಂಭಿಸಿದರು. ಅದರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ವರ್ಷಕ್ಕೆ 10 ಸಾವಿರ ಕೋಟಿ ರೂಪಾಯಿಗಳಂತೆ ಖರ್ಚು ಮಾಡುವ ಭರವಸೆಯನ್ನು ನೀಡಿದ್ದರ ಬಗ್ಗೆ ಪ್ರಸ್ತಾಪಿಸಿದರು. ಸರ್ಕಾರ ದಕ್ಷಿಣ ಕರ್ನಾಟಕ ಜನರ ಪರವಾಗಿದ್ದು, ಉತ್ತರ ಕರ್ನಾಟಕಕ್ಕೆ ಈ ರೀತಿ ಅನ್ಯಾಯವಾಗುತ್ತಾ ಹೋದರೆ ಪ್ರತ್ಯೇಕ ರಾಜ್ಯದ ಕೂಗು ಬಲವಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com