ಸ್ನೇಹಿತರಿಗೆ ಸಹಾಯ ಮಾಡಲು ಪ್ರಧಾನಿ ಮೋದಿ ದೇಶ ಮಾರಲು ಹೊರಟಿದ್ದಾರೆ: ದಿನೇಶ್ ಗುಂಡೂರಾವ್

ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಕಾಂಗ್ರೆಸ್ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಲೋಕಸಭೆ ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ರಫೆಲ್ ಯುದ್ಧ ವಿಮಾನ ಒಪ್ಪಂದ ಕುರಿತು ಕಾಂಗ್ರೆಸ್ ಸುಮ್ಮನೆ ಕೂರುವಂತೆ ಕಾಣುತ್ತಿಲ್ಲ. ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡನೆ ಮಾಡಿದ ನಂತರ ಇದೀಗ ಕಾಂಗ್ರೆಸ್ ನ ಎಲ್ಲಾ ರಾಜ್ಯ ಘಟಕಗಳು ಯುದ್ಧ ವಿಮಾನದ ಬೆಲೆ ವ್ಯತ್ಯಾಸದ ಬಗ್ಗೆ ಎನ್ ಡಿಎ ಸರ್ಕಾರ ಉತ್ತರ ನೀಡಬೇಕೆಂದು ಒತ್ತಾಯಿಸುತ್ತಿವೆ.

ರಫೆಲ್ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ರಕ್ಷಣಾ ಮತ್ತು ಎಂಜಿನಿಯರಿಂಗ್ ಲಿಮಿಟೆಡ್ ಜೊತೆ ಸರ್ಕಾರ ವ್ಯತಿರಿಕ್ತ ಒಪ್ಪಂದ ಮಾಡಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ದೇಶವನ್ನು ತಪ್ಪು ದಾರಿಗೆ ಎಳೆದಿರುವುದು ಮಾತ್ರವಲ್ಲದೆ ತಮ್ಮ ಸ್ನೇಹಿತರಿಗೆ ಸಹಾಯ ಮಾಡಲು ದೇಶವನ್ನೇ ಮಾರಲು ಹೊರಟಿದ್ದಾರೆ ಎಂದು ಆಪಾದಿಸಿದರು.

ರಫೆಲ್ ಯುದ್ಧವಿಮಾನ ಒಪ್ಪಂದ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೇಳಿರುವ ನೇರ ಪ್ರಶ್ನೆಗಳಿಗೆ ಉತ್ತರಿಸಲು  ಪ್ರಧಾನಿಯವರು ನಿರಾಕರಿಸಿರುವುದು ನೋಡಿದರೆ ಈ ಒಪ್ಪಂದ ಯಾರೂ ಊಹಿಸದ ರೀತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಕಂಡುಬರುತ್ತದೆ. ಈ ಒಪ್ಪಂದ ಮೂಲಕ, ಸ್ನೇಹಿತನಿಗೆ ಸಹಾಯ ಮಾಡಲು ರಾಷ್ಟ್ರೀಯ ಭದ್ರತೆಯ ಸಮಗ್ರತೆಯನ್ನು ಹಾಳುಮಾಡಿದ ಪ್ರಧಾನಿ ಎಂದು ಇತಿಹಾಸದ ಪುಟ ಸೇರಲಿದ್ದಾರೆ ಎಂದು ಟೀಕಿಸಿದರು.

ಪ್ರಧಾನಿಯವರ ಅಚ್ಚೇ ದಿನ್ ವಾಕ್ಯ ನನಸಾಗುತ್ತದೆ, ಆದರೆ ಅದು ಈ ದೇಶದ ಬಂಡವಾಳಶಾಹಿಗಳಿಗೆ ಮಾತ್ರ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com