ದೋಸ್ತಿ ಸರ್ಕಾರ ಸುಸೂತ್ರಕ್ಕೆ ಸಮನ್ವಯ ಸಮಿತಿ: ಸಿದ್ದು ಕೈಗೆ ಮೈತ್ರಿ ಲಗಾಮು!

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯಿಂದಾಗಿ ಬಲವಂತವಾಗಿ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಬೇಕಾಯಿತು...
ಸಮನ್ವಯ ಸಮಿತಿ
ಸಮನ್ವಯ ಸಮಿತಿ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಯಿಂದಾಗಿ ಬಲವಂತವಾಗಿ ಜೆಡಿಎಸ್ ಜೊತೆ ಸೇರಿ ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಬೇಕಾಯಿತು. 
ಸಮ್ಮಿಶ್ರ ಸರಕಾರದ ರಚನೆ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಸಮ್ಮಿಶ್ರ ಸರ್ಕಾರಕ್ಕೆ ಸಮನ್ವಯ ಸಮಿತಿ ರಚನೆ ಮಾಡಲಾಗಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 
ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ಸೇರಿದಂತೆ ಡಿಸಿಎಂ ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್,ಜೆಡಿಎಸ್ ಕಾರ್ಯದರ್ಶಿ ಡ್ಯಾನೀಶ್ ಅಲಿ ಸಮಿತಿಯ ಸಂಚಾಲಕರಾಗಿರುತ್ತಾರೆ,ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿರುತ್ತಾರೆ. ಸರ್ಕಾರ ಸುಸೂತ್ರವಾಗಿ ನಡೆಸುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸಲಹೆ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. 
ಸರ್ಕಾರದಲ್ಲಿ ತಮಗೆ ಸಮಾನ ಅಧಿಕಾರವುಳ್ಳ ಹುದ್ದೆ ನೀಡಬೇಕು ಎಂದು ಸಿದ್ದರಾಮಯ್ಯ ಬೇಡಿಕೆಯಿಟ್ಟಿದ್ದರು. ಡಿಸಿಎಂ ಆಗಿರುವ ಪರಮೇಶ್ವರ್ ಸಮನ್ವಯ ಸಮಿತಿಯ ಸದಸ್ಯರಾಗಿದ್ದಾರೆ, ಹೀಗಾಗಿ ನಿಗಮ-ಮಂಡಳಿ ನೇಮಕ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಸಮನ್ವಯ ಸಮಿತಿ ಸಭೆ ನಡೆಸಬೇಕಿದೆ.
ತಿಂಗಳಿಗೊಂದು ಬಾರಿ ಸಮಿತಿ ಸಭೆ ಸೇರಿ ಸರಕಾರದ ವಿವಿಧ ಯೋಜನೆ, ಆಡಳಿತದ ವಿಚಾರಗಳನ್ನು ಚರ್ಚಿಸಿ, ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ,ಸಿ ವೇಣುಗೋಪಾಲ್ ಹೇಳಿದ್ದಾರೆ,. 
ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನ ಚುನಾವಣಾ ಪ್ರಣಾಳಿಕೆ ಕುರಿತಾಗಿಯೂ ಚರ್ಚೆ ಮಾಡಿ ರಾಜ್ಯದ ಜನರ ಹಿತದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಲಾಗುವುದು ಎಂದರು. 
"ಉಭಯ ಪಕ್ಷಗಳಲ್ಲಿಯಾವುದೇ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳುವುದು ಸಮಿತಿಯ ಕೆಲಸ. ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ ಎಂಬುದು ಸರಿಯಲ್ಲ. ಉಭಯ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಮುಖ್ಯಸ್ಥರಾಗುವುದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಜೊತೆಗೆ ಗುಲಾಂ ನಬಿ ಆಜಾದ್ ಅಥವಾ ವೇಣುಗೋಪಾಲ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸುವಂತೆ ಬೇಡಿಕೆ ಇಟ್ಟಿತ್ತು. ಆದರೆ ಜೆಡಿಎಸ್ ನ ಈ ಪ್ರಸ್ತಾಪವನ್ನು ಕಾಂಗ್ರೆಸ್ ತಿರಸ್ಕರಿಸಿತ್ತು. . 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com