ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ತನಗೆ ಅನ್ಯಾಯವಾಗಿದೆ ಎಂದು ಸಚಿವ ಸ್ಥಾನ ವಂಚಿತ ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಮೂರೂ ಬಾರಿ ಗೆದ್ದಿರುವುದು ಸ್ವಂತ ಶಕ್ತಿಯಿಂದ ಹೊರತು ಕಾಂಗ್ರೆಸ್ ಹೆಸರಿನಿಂದಲ್ಲ ಎಂದು ನಾಗರಾಜ್ ಹೇಳಿದ್ದಾರೆ.
ಕಳೆದ 35 ವರ್ಷಗಳಿಂದ ಪಕ್ಷಕ್ಕಾಗಿ ದುಡಿದು ಪ್ರಬಲ ಅಭ್ಯರ್ಥಿ ಬಚ್ಚೇಗೌಡರನ್ನು ಎದುರಿಸಿ ಗೆಲುವು ಸಾಧಿಸಿ ಶಾಸಕನಾಗಿದ್ದೇನೆ. ಎರಡು ಬಾರಿ ಗೆದ್ದವರಿಗೆ ಎರಡೆರಡು ಬಾರಿ ಸಚಿವರನ್ನಾಗಿ ಮಾಡಿದ್ದಾರೆ ನನ್ನನ್ನು ಯಾಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ನನ್ನ ಬೆಂಬಲಿಗ ಪಂಚಾಯತ್ ಸದಸ್ಯರು ಮತ್ತು ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಸದಸ್ಯರು ರಾಜಿನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿರುವ ಎಂಟಿಬಿ ನಾಗರಾಜ್ ಅವರು ಚುನಾವಣೆ ವೇಳೆ 470 ಕೋಟಿ ರುಪಾಯಿ ಆಸ್ತಿ ಘೋಷಿಸಿಕೊಂಡಿದ್ದರು.