ಬೆಂಗಳೂರು: ನಾನು ಏಕಾಂಗಿಯಲ್ಲ, ನನ್ನ ಜೊತೆ 15ರಿಂದ 20 ಶಾಸಕರಿದ್ದಾರೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಸದಾಶಿವನಗರದಲ್ಲಿರುವ ಎಂಬಿ ಪಾಟೀಲ್ ಮನೆಗೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರು,. ಬಳಿಕ ಮಾತನಾಡಿದ ಎಂ ಬಿ ಪಾಟೀಲ್. ನಾನು ಏಕಾಂಗಿಯಲ್ಲ. ಕಾಂಗ್ರೆಸ್ ನ ಹಲವು ಸ್ನೇಹಿತರು ನನ್ನ ಜೊತೆಗಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವೆಲ್ಲಾ ಒಟ್ಟಿಗೆ ಕೂತು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ನನ್ನನ್ನು ಡಂಪ್ ಮಾಡಿತು ಆದರೆ ನಾನು, ಪಕ್ಷಕ್ಕೆ ವಿಶ್ವಾಸ ದ್ರೋಹ ಮಾಡುವುದಿಲ್ಲ, ಹೈಕಮಾಂಡ್ ಭೇಟಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಕುಮಾರ ಸ್ವಾಮಿ, ಪಾಟೀಲ್ ಅವರ ಮನಸ್ಸಿನ ನೋವಿನ ಭಾವನೆ ನನಗೆ ಅರ್ಥವಾಗಿದೆ, ವಯಕ್ತಿಕ ಸಂಬಂಧವಾಗಿ ನಾನು ಇಲ್ಲಿಗೆ ಬಂದಿದ್ದೇನೆ, ಪಕ್ಷದ ವಿಚಾರಕ್ಕೂ ನನಗೂ ಸಂಬಂಧವಿಲ್ಲ, ಸಮ್ಮಿಶ್ರ ಸರ್ಕಾರದ ಹಿನ್ನೆಲೆಯಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆ ಡಿಸಿಎಂ ಪರಮೇಶ್ವರ್, ಡಿಕೆ ಶಿವಕುಮಾರ್ ಹಾಗೂ ಆರ್ ವಿ ದೇಶಪಾಂಡೆ ಎಂಬಿ ಪಾಟೀಲ್ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಮುಂದಾಗಿದ್ದರು.