ಮತಗಟ್ಟೆಯೊಂದರಲ್ಲಿ ಕಂಡುಬಂದ ದೃಶ್ಯ
ಮತಗಟ್ಟೆಯೊಂದರಲ್ಲಿ ಕಂಡುಬಂದ ದೃಶ್ಯ

ತುಂತುರು ಮಳೆ, ವಾರದ ಆರಂಭ: ಜಯನಗರದಲ್ಲಿ ನೀರಸ ಮತದಾನ

ವಾರದ ಆರಂಭ ಮತ್ತು ತುಂತುರು ಮಳೆ ಸುರಿಯುತ್ತಿದ್ದುದರಿಂದಲೋ ಜಯನಗರ ವಿಧಾನಸಭಾ ...
Published on

ಬೆಂಗಳೂರು: ವಾರದ ಆರಂಭ ಮತ್ತು ತುಂತುರು ಮಳೆ ಸುರಿಯುತ್ತಿದ್ದುದರಿಂದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವಲ್ಲಿ ಹಿಂದೇಟು ಹಾಕಿದ್ದಾರೆ. ಹಿರಿಯ ವ್ಯಕ್ತಿಗಳಿಂದ ಹಿಡಿದು ಯುವಕರವರೆಗೆ ನಿನ್ನೆ ಸಾಯಂಕಾಲ 6 ಗಂಟೆ  ವೇಳೆಗೆ ಕೇವಲ ಶೇಕಡಾ 55ರಷ್ಟು ಮತದಾನವಾಗಿದೆ.

ಜಯನಗರದ ಹಲವು ಕಂಪೆನಿಗಳಲ್ಲಿ ನಿನ್ನೆ ಮತದಾನದ ಹಿನ್ನಲೆಯಲ್ಲಿ ಉದ್ಯೋಗಿಗಳಿಗೆ ರಜೆ ನೀಡಲಾಗಿದ್ದರೂ ಕೂಡ ಹಲವು ಎಂಎನ್ ಸಿ ಕಂಪೆನಿಗಳು ಮತ್ತು ಖಾಸಗಿ ಕಂಪೆನಿಗಳ ನೌಕರರು ವಾರದ ಆರಂಭದ ದಿನವಾದ್ದರಿಂದ ಮತದಾನಕ್ಕೆ ಮತಗಟ್ಟೆಗಳಿಗೆ ಹೋಗದೆ ತಪ್ಪಿಸಿಕೊಂಡರು.

ನಿನ್ನೆ ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 34.05 ಮತದಾನವಾದರೆ ಅಪರಾಹ್ನ 3 ಗಂಟೆ ವೇಳೆಗೆ ಶೇಕಡಾ 42.6ರಷ್ಟು ಮತ ಚಲಾವಣೆಯಾಯಿತು. ಮಧ್ಯಾಹ್ನದ ನಂತರ ಮತದಾನದಲ್ಲಿ ಕುಂಠಿತ ಕಂಡುಬಂತು. ಬೆಂಗಳೂರು ನಗರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 54.72ರಷ್ಟು ಮತ ಚಲಾವಣೆಯಾಗಿತ್ತು. ಒಂದೆರಡು ಕಡೆ ಬ್ಯಾಲಟ್ ಯೂನಿಟ್ ಗಳು,ನಿಯಂತ್ರಣಾ ಘಟಕ ಮತ್ತು ಎರಡು ವಿವಿಪ್ಯಾಟ್ ಗಳಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ ಬದಲಾವಣೆ ಮಾಡಲಾಯಿತು.

ನಮ್ಮ ಕಂಪೆನಿಯಲ್ಲಿ ಅರ್ಧ ದಿನ ರಜೆ ನೀಡಿದ್ದರು. ಮಧ್ಯಾಹ್ನದ ಹೊತ್ತಿಗೆ ಕಂಪೆನಿಯಿಂದ ಬಸ್ ಕರೆದುಕೊಂಡು ಹೋಗಲು ಬಂತು ಎನ್ನುತ್ತಾರೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿರುವ ನರಹರಿ ಎಂಬುವವರು. ಜಯನಗರದ ಕೊಳಚೆ ಪ್ರದೇಶದ ಸಮಸ್ಯೆ, ಕಸ ವಿಲೇವಾರಿ ಸಮಸ್ಯೆಯನ್ನು ನೂತನ ಶಾಸಕರು ಬಗೆಹರಿಸುತ್ತಾರೆ ಎಂಬ ವಿಶ್ವಾಸದಲ್ಲಿ ವಯೋವೃದ್ಧ ವಿಜಯರಾಘವನ್ ಇದ್ದಾರೆ.

ಜಯನಗರ ಕ್ಷೇತ್ರದ ಮತಗಟ್ಟೆಗಳಲ್ಲಿ ಸುಮಾರು 40ರಿಂದ 50 ವರ್ಷದೊಳಗಿನ ಮತದಾರರ ಸಂಖ್ಯೆ ಅಧಿಕವಾಗಿತ್ತು. ನಾಳೆ ಫಲಿತಾಂಶ ಪ್ರಕಟವಾಗಲಿದೆ.ಬಿಜೆಪಿ ಅಭ್ಯರ್ಥಿ ಬಿ ಎನ್ ಪ್ರಹ್ಲಾದ್ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸೌಮ್ಯ ರೆಡ್ಡಿ ನಡುವೆ ನೇರ ಹಣಾಹಣಿಯಿದೆ. ಎರಡೂ ಪಕ್ಷಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಬಿಜೆಪಿ ಗೆದ್ದರೆ ಅದರ ಶಾಸಕರ ಸಂಖ್ಯೆ 105ಕ್ಕೇರಲಿದ್ದು, ಕಾಂಗ್ರೆಸ್ ಜಯ ಗಳಿಸಿದರೆ ಅದರ ಶಾಸಕರ ಸಂಖ್ಯೆ 80ಕ್ಕೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com