ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.
ಯಮಕನಮರಡಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್ ಟಿ ಸಮುದಾಯದ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜಿನಾಮೆ ಪತ್ರ ರವಾನಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ರಾಹುಲ್ ಗಾಂಧಿಯನ್ನು ದೆಹಲಿಯಲ್ಲಿ ಭೇಟಿ ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಲಿದ್ದಾರೆ.
ಹೌದು, ನಾನು ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ನೀಡಿದ್ದೇನೆ. ಸೋಮವಾರವೇ ನನ್ನ ರಾಜಿನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಕಳುಹಿಸಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.
ಇದೇ ವೇಳೆ 'ಇದು ಖಾತೆ ಕ್ಯಾತೆಯೂ ಅಲ್ಲ, ಬಂಡಾಯವೂ ಅಲ್ಲ. ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಉನ್ನತ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ, ಇದನ್ನು ದೊಡ್ಡ ವಿವಾದವಾಗಿಸುವುದು ಬೇಡ' ಎಂದು ಸಹ ಸತೀಶ್ ಜಾರಕಿಹೊಳಿ ಮಾಧ್ಯಮಕ್ಕೆ ಮನವಿ ಮಾಡಿದ್ದಾರೆ.
ನನ್ನ ವಿರೋಧಿಗಳು ಬೆಂಗಳೂರು ಹಾಗೂ ದೆಹಲಿಯಲ್ಲೂ ಇದ್ದಾರೆ. ನನಗೆ ಬೇಕು ಅಂತಲೆ ಸಚಿವ ಸ್ಥಾನವನ್ನು ತಪ್ಪಿಸಿದ್ದಾರೆ. ನನಗೆ ಸಚಿವ ಸ್ಥಾನ ತಪ್ಪಿಸಿದವರು ಯಾರೆಂಬುದು ನನಗೆ ಗೊತ್ತು. ಅದನ್ನು ಇನ್ನು ಒಂದು ವಾರದಲ್ಲಿ ಬಹಿರಂಗಪಡಿಸುವುದಾಗಿ ಇತ್ತೀಚಿಗೆ ಹೇಳಿದ್ದರು.