ಅಲ್ಪಸಂಖ್ಯಾತ ಸಮುದಾಯದ ನಾಯಕ ಯಾರು?: ಸಚಿವ ಜಮೀರ್, ತನ್ವೀರ್ ಸೇಠ್ ನಡುವೆ ಕಿತ್ತಾಟ

ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಮತ್ತು ...
ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್
ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್

ಬೆಂಗಳೂರು: ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಖಾತೆ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್ ಮತ್ತು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ನಡುವಿನ ಕಿತ್ತಾಟ ಮುಂದುವರಿದಿದೆ.

ಜಮೀರ್ ಅಲ್ಪಸಂಖ್ಯಾತ ಸಮುದಾಯಗಳ ನಾಯಕರಲ್ಲ ಎಂದು ತನ್ವೀರ್ ಸೇಠ್ ನೀಡಿದ ಹೇಳಿಕೆಗೆ ಕೆರಳಿರುವ ಜಮೀರ್ ಅಹ್ಮದ್ ಖಾನ್ ತನ್ವೀರ್ ಸೇಠ್ ಗೆ ಸವಾಲು ಹಾಕಿ ಮೈಸೂರಿಗೆ ಬಂದು ನೋಡಿ, ಅಲ್ಲಿ ಹೆಚ್ಚು ಜನಪ್ರಿಯ ನಾಯಕ ಯಾರು ಎಂದು ನೋಡಿ ಎಂದು ಹೇಳಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಮೀರ್, ನಾನು ಅಲ್ಪಸಂಖ್ಯಾತ ಸಮುದಾಯದ ನಾಯಕನು ಹೌದು ಅಥವಾ ಅಲ್ಲವೇ ಎಂದು ನಿರ್ಧರಿಸುವುದು ತನ್ವೀರ್ ಸೇಠ್ ಅಲ್ಲ, ಈ ರಾಜ್ಯದ ಜನರು ಎಂದು ತಿರುಗೇಟು ನೀಡಿದ್ದಾರೆ.
 
ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರುವ ಜಮೀರ್ ಅಹ್ಮದ್ ಖಾನ್ ಮತ್ತು ಯು ಟಿ ಖಾದರ್ ವಿರುದ್ಧ ಹರಿಹಾಯ್ದಿದ್ದ ತನ್ವೀರ್ ಸೇಠ್ ಇವರಿಬ್ಬರೂ ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ನಾಯಕತ್ವ ಗುಣವನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದರು.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಜಮೀರ್ ತನ್ವೀರ್ ಸೇಠ್ ವಿರುದ್ಧವಾಗಿ ಕೆಲಸ ಮಾಡಿದ್ದರು ಎಂಬ ಆರೋಪವನ್ನು ಜಮೀರ್ ತಳ್ಳಿಹಾಕಿದ್ದಾರೆ. ಪ್ರತಿ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ವೀಕ್ಷಕರು ಇದ್ದರು, ಹೀಗಾಗಿ ಅವರ ವಿರುದ್ಧವಾಗಿ ಕೆಲಸ ಮಾಡುವ ಸಾಧ್ಯತೆಯೇ ಬರುವುದಿಲ್ಲ ಎಂದಿದ್ದರು.

ತಮ್ಮ ಪಕ್ಷದವರೇ ಸೋಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರಿಗೆ ಗೊತ್ತಾಗಿದ್ದರೆ ತಕ್ಷಣವೇ ತನ್ವೀರ್ ಸೇಠ್ ವೀಕ್ಷಕರ ಗಮನಕ್ಕೆ ತರಬೇಕಾಗಿತ್ತು. ಅದು ಬಿಟ್ಟು ಚುನಾವಣೆ ಮುಗಿದ ತಿಂಗಳ ಬಳಿಕ ಆ ವಿಷಯವನ್ನೇಕೆ ಪ್ರಸ್ತಾಪಿಸುತ್ತಿದ್ದಾರೆ ಎಂದು ಜಮೀರ್ ಅಹ್ಮದ್ ಖಾನ್ ಪ್ರಶ್ನಿಸಿದ್ದಾರೆ.

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆಯನ್ನು 2 ಕೆಜಿ ಗೆ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆಯಿದೆ. ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಮಂಗಳೂರು ಮತ್ತು ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣ ಮಾಡಲಾಗುವುದು ಎಂದು ಕೂಡ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com