ವಿಜಯಪುರ: ನಾಗತಾನ್ ಶಾಸಕ ದೇವಾನಂದ ಚವಾಣ್ ಅವರಿಗೆ ಪದೇ ಪದೇ ರೌಡಿ ಶೀಟರ್ ನಿಂದ ಜೀವ ಬೆದರಿಕೆ ಕರೆ ಬರುತ್ತಿವೆ ಎಂದು ಆರೋಪಿಸಿದ್ದಾರೆ.
ರೌಡಿ ಶೀಟರ್ ಎಂಎಸ್ ಬೈರಗೌಡ ಮತ್ತು ಅವರ ಬೆಂಬಲಿಗರು ದೂರವಾಣಿ ಮೂಲಕ ಕಳೆದ ಮೂರು ತಿಂಗಳಿಂದ ಜೀವ ಬೆದರಿಕೆ ಒಡ್ಡುತ್ತಿದ್ದಾರೆ.ಈ ಸಂಬಂಧ ಎಸ್ ಪಿ ಕುಲದೀಪ್ ಜೈನ್ ಅವರಿಗೂ ಮಾಹಿತಿ ನೀಡಿದ್ದೇನೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಶಾಸಕನಾಗಿ ಆಯ್ಕೆಯಾದ ಮೇಲೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ. ಇನ್ನು ಒಂದು ಎರಡು ದಿನದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಪತ್ರ ಬರೆದು ಭದ್ರತೆ ನೀಡುವಂತೆ ಕೋರುತ್ತೇನೆ ಎಂದು ಹೇಳಿದ್ದಾರೆ.
ಧರ್ಮರಾಜ್ ಚಡಚಣ ಶೂಟೌಟ್ ಕೇಸ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ನಕಲಿ ಎನ್ ಕೌಂಟರ್ ಎಂದು ಆರೋಪಿಸಲಾಗಿದೆ, ಹಿಂದೆಯೂ ಇದೇ ರೀತಿ ಕೇಸ್ ಗಳು ನಡೆದಿವೆ, ಹೀಗಾಗಿ ಈ ಹಿಂದೆ ನಡೆದಿರುವ ಎಲ್ಲಾ ಶೂಟೌಟ್ ಮತ್ತು ಎನ್ ಕೌಂಟರ್ ಗಳ ಬಗ್ಗೆ ಮರು ತನಿಖೆ ನಡೆಸಬೇಕೆಂದು ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ.
ಭೀಮಾ ತೀರದಲ್ಲಿ ನಡೆದಿರುವ ಹಲವು ಕೊಲೆ ಮತ್ತು ಶೂಟೌಟ್ ಗೆ ಬೈರಗೌಡ ಕಾರಣ. ಪೊಲೀಸ್ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.