
ಮೈಸೂರು: ಹೈದ್ರಾಬಾದ್ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿನ ಯಶಸ್ವಿ ಜನಾಶೀರ್ವಾದ ಯಾತ್ರೆಯ ಬಳಿಕ ರಾಹುಲ್ ಗಾಂಧಿ ಇದೀಗ ಮೂರನೇ ಹಂತದಲ್ಲಿ ಇದೇ ತಿಂಗಳ 24 ಹಾಗೂ 25 ರಂದು ಮೈಸೂರು , ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ನಡೆಸಲಿದ್ದಾರೆ.
ರಾಹುಲ್ ಗಾಂಧಿ ಮಂಡ್ಯ ಜಿಲ್ಲೆಯ ಮಳವಳ್ಳಿ ಮತ್ತಿತರ ಕಡೆಗಳಲ್ಲೂ ಪ್ರವಾಸ ನಡೆಸಲಿದ್ದಾರೆ.ರಾಹುಲ್ ಗಾಂಧಿ ಅವರ ಈ ಯಾತ್ರೆ ಯಶಸ್ವಿಗೊಳಿಸಲು ಕಾಂಗ್ರೆಸ್ ಪಣತೊಟ್ಟಿದೆ.
ಮೈಸೂರಿನ ಮಹಾರಾಜ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.
ಕನ್ನಡ ಸಾಹಿತ್ಯ ಸಮ್ಮೇಳನ, ಅಂತಾರಾಷ್ಟ್ರೀಯ ಅಂಬೇಡ್ಕರ್ ಸಮ್ಮೇಳನ, ದಸರಾ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಲೋಕೋಪಯೋಗಿ ಸಚಿವ ಡಾ. ಎಚ್. ಸಿ. ಮಹಾದೇವಪ್ಪ ಅವರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ.
ಈ ಸಂದರ್ಭದಲ್ಲಿ ಜೆಡಿಎಸ್ ನ ಬಂಡಾಯ ಶಾಸಕರುಗಳಾದ ಎನ್. ಚಲುವರಾಯಸ್ವಾಮಿ, ಎಚ್. ಸಿ. ಬಾಲಕೃಷ್ಣ, ಜಮ್ಮೀರ್ ಅಹಮ್ಮದ್ ಖಾನ್, ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಈ ನಾಯಕರು ಕಾಂಗ್ರೆಸ್ ಪರ ಗುರುತಿಸಿಕೊಂಡಿದ್ದು, ಅಂದು ಅಧಿಕೃತವಾಗಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
Advertisement