ನೋಟು ನಿಷೇಧ ಹಾಗೂ ಜಿಎಸ್ ಟಿಯಿಂದ ದೇಶದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿ ಮೇಲೆ ಹಾನಿ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರದ ಅಧಿಕ ಮೌಲ್ಯದ ನೋಟುಗಳ ಚಲಾವಣೆ ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಯ ವಿಧಾನವನ್ನು ...
ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ
ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ

ಮೈಸೂರು: ಕೇಂದ್ರ ಸರ್ಕಾರದ ಅಧಿಕ ಮೌಲ್ಯದ ನೋಟುಗಳ ಚಲಾವಣೆ ನಿಷೇಧ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಯ ವಿಧಾನವನ್ನು ನಾವು ವಿರೋಧಿಸುತ್ತೇವೆ. ಇವೆರಡೂ ಅಂಶಗಳು ಇಂದು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಪೂರ್ವ ಕಾಂಗ್ರೆಸ್ ಹಮ್ಮಿಕೊಂಡಿರುವ ಜನಾಶೀರ್ವಾದ ಯಾತ್ರೆಯ ನಾಲ್ಕನೇ ಹಂತದಲ್ಲಿ ಇಂದು ರಾಹುಲ್ ಗಾಂಧಿಯವರು ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಜಿಎಸ್ ಟಿಯಡಿಯಲ್ಲಿ ಏಕರೂಪ ತೆರಿಗೆ ವಿಧಾನಕ್ಕೆ ಪ್ರೋತ್ಸಾಹ ನೀಡುತ್ತಿದ್ದೆವು. ಜಿಎಸ್ ಟಿಯನ್ನು ನಾವು ವಿರೋಧಿಸುವುದಿಲ್ಲ. ಅದರ ಜಾರಿ ವಿಧಾನ ಮಾತ್ರ ತಪ್ಪಾಗಿದೆ. ಮೋದಿ ಸರ್ಕಾರ ಈ ವಿಚಾರದಲ್ಲಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದು ಅತಿಯಾದ ತೆರಿಗೆ ದರಗಳನ್ನು ವಿಧಿಸಿದೆ. ಕೇಂದ್ರದಲ್ಲಿ ಯುಪಿಎ ಮತ್ತೆ ಅಧಿಕಾರಕ್ಕೆ ಬಂದರೆ ಜಿಎಸ್ ಟಿಯನ್ನು ಮರು ರಚನೆ ಮಾಡುತ್ತೇವೆ ಎಂದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಜಿಎಸ್ ಟಿ ಮತ್ತು ನೋಟುಗಳ ಅಮಾನ್ಯತೆ ದೇಶದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿ ಮೇಲೆ ಭಾರೀ ದೊಡ್ಡ ಹಾನಿಯುಂಟುಮಾಡಿದೆ. ಈ ಎರಡು ವ್ಯವಸ್ಥೆಗಳನ್ನು ಜಾರಿಗೆ ತರುವಾಗ ಆರ್ಥಿಕತೆ ಬಗ್ಗೆ ಸರಿಯಾದ ಅನುಭವವಿರುವವರಲ್ಲಿ ಚರ್ಚೆ ನಡೆಸಿ, ಜನರ ಅಭಿಪ್ರಾಯ ಕೇಳಿ ತರಲಿಲ್ಲ. ಬಿಜೆಪಿಯೇ ಸ್ವಂತ ನಿರ್ಧಾರ ತೆಗೆದುಕೊಂಡಿತು ಎಂದು ಜಿಎಸ್ ಟಿ ಮತ್ತು ಡಿ ಮಾನಿಟೈಸೇಷನ್ ಬಗ್ಗೆ ವಿದ್ಯಾರ್ಥಿನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಇಲ್ಲಿ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಬಿಜೆಪಿ, ಆರ್ ಎಸ್ಎಸ್ ನದ್ದು ಒಂದೇ ಯೋಚನೆ, ಒಂದೇ ದೇಶವಾಗಿದೆ. ಆದರೆ ಕಾಂಗ್ರೆಸ್ ದೇಶದ ಬಗ್ಗೆ ಹಲವು ಆಲೋಚನೆಗಳನ್ನು ಹೊಂದಿದೆ ಎಂದರು.

ವಿದ್ಯಾರ್ಥಿನಿಯೊಬ್ಬರು ರಾಹುಲ್ ಸರ್ ಎಂದು ಕರೆದಾಗ ತಮ್ಮನ್ನು ಸರ್ ಎಂದು ಸಂಬೋಧಿಸಬೇಕಾಗಿಲ್ಲ. ರಾಹುಲ್ ಎಂದೇ ಕರೆಯಿರಿ ಎಂದರು.

ಮತ್ತೊಬ್ಬ ವಿದ್ಯಾರ್ಥಿನಿ ಕನ್ನಡದಲ್ಲಿ ಪ್ರಶ್ನೆ ಕೇಳಿದಾಗ ಆಕೆಯ ಪ್ರಾಧ್ಯಾಪಕರು ಇಂಗ್ಲಿಷ್ ನಲ್ಲಿ ಪ್ರಶ್ನೆ ಕೇಳಿ ಎಂದು ಸೂಚಿಸಿದರು. ಅದಕ್ಕೆ ರಾಹುಲ್ ಗಾಂಧಿ, ಬೇಡ ನೀವು ಕನ್ನಡದಲ್ಲಿಯೇ ಕೇಳಿ, ನಾವು ಇಂಗ್ಲಿಷ್ ಗೆ ತರ್ಜುಮೆ ಮಾಡಿಕೊಳ್ಳುತ್ತೇವೆ ಎಂದರು. ಮೈಸೂರು ತುಂಬಾ ಸುಂದರ ನಗರಿ ಎಂದು ಸಂತೋಷಪಟ್ಟರು.

ಇದಕ್ಕೂ ಮುನ್ನ ರಾಹುಲ್ ಗಾಂಧಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು. ಇಂದು ಬೆಳಗ್ಗೆ  ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ  ರಾಹುಲ್ ಗಾಂಧಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಬರಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com