ಕುವೆಂಪು ಸಾಲನ್ನು ಉಲ್ಲೇಖಿಸಿ ಟಾಂಗ್ ನೀಡಿದ್ದ ಅಮಿತ್ ಶಾಗೆ ಕವಿ ನುಡಿಯನ್ನೇ ಬಳಸಿ ತಿರುಗೇಟು ಕೊಟ್ಟ ಸಿದ್ದರಾಮಯ್ಯ!

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ, ಕಾಂಗ್ರೆಸ್-ಬಿಜೆಪಿ ಪರಸ್ಪರ ಹೇಳಿಕೆ, ಪ್ರತಿಹೇಳಿಕೆಗಳ ಮೂಲಕ ತಮ್ಮ ಮೇಲ್ಮೆಗಳನ್ನು ಸಾಧಿಸಲು ಹೊರಟಿದೆ.
ಸಿದ್ದರಾಮಯ್ಯ ಮತ್ತು  ಅಮಿತ್ ಶಾ
ಸಿದ್ದರಾಮಯ್ಯ ಮತ್ತು ಅಮಿತ್ ಶಾ
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ, ಕಾಂಗ್ರೆಸ್-ಬಿಜೆಪಿ ಪರಸ್ಪರ ಹೇಳಿಕೆ, ಪ್ರತಿಹೇಳಿಕೆಗಳ ಮೂಲಕ ತಮ್ಮ ಮೇಲ್ಮೆಗಳನ್ನು ಸಾಧಿಸಲು ಹೊರಟಿದೆ. ಈ ನಡುವೆ ಅಮಿತ್ ಶಾ ಹಾಗೂ ಸಿದ್ದರಾಮಯ್ಯ ಕುವೆಂಪು ವಿರಚಿತ ನಾಡಗೀತೆಯ ಸಾಲುಗಳನ್ನು ಉಲ್ಲೇಖಿಸಿ ಪರಸ್ಪರರು ಕಾಲೆಳೆಯುವ ಕೆಲಸ ಮಾಡಿದ್ದಾರೆ.
ಸೋಮವಾರದಂದು ಕುಪ್ಪಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕುವೆಂಪುರವರು ಕರ್ನಾಟಕವನ್ನು "ಸರ್ವ ಜನಾಂಗದ ಶಾಂತಿಯ ತೋಟ" ಎಂದು ಕೊಂಡಾಡಿದ್ದರು. ಅಂತಹ ಶಾಂತಿಯ ಬೀಡಾದ ಈ ರಾಜ್ಯವನ್ನು ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಕೋಮು ಸಂಘರ್ಷ ಮತ್ತು  ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿದ್ದು ಅತ್ಯಂತ ಖಂಡನೀಯ. ಇದಕ್ಕೆ ಅವರು ಬೆಲೆ ತೆರೆಯುತ್ತಾರೆ. ಎಂದು ಟ್ವೀಟ್ ಮಾಡಿದ್ದರು. 
ಇಂದು ಅಮಿತ್ ಶಾ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಮೀತ್‌ ಶಾ ಅಂತವರು ಸಹ ಕುವೆಂಪು ನುಡಿಗಳನ್ನು ಬಳಸುವಂತೆ ಮಾಡಿದ ಕರ್ನಾಟಕದ ಚುನಾವಣೆಗೆ ಧನ್ಯವಾದ. ರಾಷ್ಟ್ರಕವಿಯ ‘ಎಲ್ಲರನ್ನು ಒಳಗೊಳ್ಳುವ ದೃಷ್ಟಿಕೋನ’ದಿಂದ ಹೊರತಾದ ಪಕ್ಷದವರಾದ ಅಮಿತ್‌ ಶಾ ಉಲ್ಲೇಖಿಸಿರುವ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಲುಗಳ ಮುಂದಿನ ಸಾಲನ್ನು ಬಹುಶ: ಓದಿರಲಿಕ್ಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ತಮ್ಮ ಟ್ವೀಟ್ ನಲ್ಲಿ ಕುವೆಂಪು ನಾಡಗೀತೆಯ 
‘ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ’ ಎಂದು ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com