
ಬೆಂಗಳೂರು: ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದ ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ, ಪುತ್ರ ಶಾಸಕ ಪ್ರಿಯಾ ಕೃಷ್ಣಪ್ಪ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಕಾಂಗ್ರೆಸ್ ನಲ್ಲಿ ಉಳಿಸಿಕೊಳ್ಳುವ ಕಾರ್ಯದಲ್ಲಿ ಕಾಂಗ್ರೆಸ್ ಮೊದಲ ಸುತ್ತಿನಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೇತೃತ್ವದಲ್ಲಿ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಾವು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಈ ನಾಯಕರು ಭರವಸೆ ನೀಡಿದ್ದಾರೆ.
ಈ ನಾಯಕರನ್ನು ಬಿಜೆಪಿ ಮುಖಂಡರು ಸಂಪರ್ಕಿಸಿ ಸೆಳೆಯಲೆತ್ನಿಸಿದ್ದು ಕಾಂಗ್ರೆಸ್ ಗೆ ಕೆಲ ದಿನಗಳಿಂದ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಕರಾವಳಿ ಭಾಗದಲ್ಲಿ ಈ ಬಾರಿ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಯಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಹೆಚ್ಚಿರುವುದರಿಂದ ಬಿಜೆಪಿಯ ತಂತ್ರಗಳಿಗೆ ಆಸೆ ಆಮಿಷಗಳಿಗೆ ಹೋಗದಂತೆ ಮುಖ್ಯಮಂತ್ರಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಒಲಿಸಿದ್ದಾರೆ ಎನ್ನಲಾಗುತ್ತಿದೆ.
ವಸತಿ ಸಚಿವ ಎಂ.ಕೃಷ್ಣಪ್ಪ ಅವರಿಗೆ ಸಹ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ವಿಜಯನಗರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೃಷ್ಣಪ್ಪ ಇತ್ತೀಚೆಗೆ ಮಂಡ್ಯಕ್ಕೆ ರಾಹುಲ್ ಗಾಂಧಿಯವರು ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಲಾಗಿತ್ತು ಎಂದು ಅಸಂತೃಪ್ತಗೊಂಡಿದ್ದರು ಎನ್ನಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾದರೂ ಕೂಡ ಅಲ್ಲಿ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಾಶಸ್ತ್ಯ ನೀಡಲಾಗಿತ್ತು ಎಂಬುದು ಕೃಷ್ಣಪ್ಪನವರ ಅಸಮಾಧಾನಕ್ಕೆ ಕಾರಣವಾಗಿತ್ತು.
Advertisement