ಮಂಡ್ಯ: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮತದಾರರ ಓಲೈಕೆಗೆ ಮುಂದಾಗಿವೆ, ಮತದಾರರನ್ನು ಹೇಗೆಲ್ಲಾ ಸೆಳೆಯಬಹುದು ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡಿರುವ ಪ್ರಮುಖ ಪಕ್ಷಗಳು ಹಣ ಹೆಂಡದ ಮುಖಾಂತರ ಮತಗಳನ್ನು ಕೊಂಡುಕೊಳ್ಳಲು ಪ್ರಯತ್ನಿಸುತ್ತಿವೆ,
ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ವಿತರಿಸಲು ಬಾಡೂಟವನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಮತ್ತು ಚುನಾವಣಾ ಆಯೋಗದ ಅಧಿಕಾರಿಗಳು ವಾಹನ ಸಮೇತ ಮಾಂಸದೂಟ ವಶಪಡಿಸಿಕೊಂಡಿಸಿದ್ದಾರೆ.
ಮಂಡ್ಯದಕೊಪ್ಪಲು ಸಮೀಪದ ಗೆಂಡೆಹೊಸಹಳ್ಳಿ ಪಕ್ಷಿಧಾಮದ ಹೊರವಲಯದ ರಾಮಸ್ವಾಮಿ ಕಾಲುವೆ ಬಳಿ ಟಾಟಾಏಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದ, 2 ಪಾತ್ರೆ ಅನ್ನ, ಗೀರೈಸ್, ಚಿಕನ್ ಫ್ರೈ, ಚಿಕನ್ ಸಾಂಬಾರು ಹಾಗೂ 3 ಬಕೆಟ್ ಬೇಯಿಸಿದ ಮೊಟ್ಟೆಯನ್ನು ಚುನಾವಣಾ ಆಯೋಗದ ಸೆಕ್ಟರ್ ಅಧಿಕಾರಿ ಭರತ್ ವಶಪಡಿಸಿಕೊಂಡಿದ್ದಾರೆ.
ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಚಾಲಕ ಮಂಜು ಮೊದಲು ಕುಟುಂಬದ ಸಮಾರಂಭವೊಂದಕ್ಕೆ ಎಂದು ಹೇಳಿದ್ದಾರೆ, ಆದರೆ ಅದಕ್ಕೆ ಸಾಕ್ಷಿ ಕೇಳಿದಾಗ ಅದನ್ನು ಒದಿಗಸಲು ವಿಫಲವಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಆಹಾರ ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗದ ಅಧಿಕಾರಿಯ ನಿರ್ದೇಶನದಂತೆ ಆಹಾರವನ್ನು ಶ್ರೀರಂಗಪಟ್ಟಣದಲ್ಲಿ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಈ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.