ದುರ್ಬಲ ಪ್ರತಿಸ್ಪರ್ಧಿಗಳು: ವರುಣಾ ಕ್ಷೇತ್ರದಲ್ಲಿ ಯತೀಂದ್ರ ಗೆಲುವಿನ ಸಾಧ್ಯತೆ ಹೆಚ್ಚು

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರಿನ ವರುಣಾ ಕ್ಷೇತ್ರ ಅದೃಷ್ಟವೆಂದೇ ಹೇಳಬಹುದು. 2008ರಲ್ಲಿ ...
ಯತೀಂದ್ರ ಸಿದ್ಧರಾಮಯ್ಯ
ಯತೀಂದ್ರ ಸಿದ್ಧರಾಮಯ್ಯ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರಿನ ವರುಣಾ ಕ್ಷೇತ್ರ ಅದೃಷ್ಟವೆಂದೇ ಹೇಳಬಹುದು. 2008ರಲ್ಲಿ ಶಾಸಕರಾಗಿ ಆರಿಸಿ ಬಂದು ವಿಧಾನಸಭೆಯ ಪ್ರತಿಪಕ್ಷ ನಾಯಕರಾದರು. 2013ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾದರು. ಇದೀಗ ಇಲ್ಲಿಂದಲೇ ಅವರ ಪುತ್ರ ಯತೀಂದ್ರ ರಾಜಕೀಯ ಜೀವನವನ್ನು ಆರಂಭಿಸುತ್ತಿದ್ದಾರೆ.

2008ರಲ್ಲಿ ವಿಂಗಡನೆ ನಂತರ ಚಾಮುಂಡೇಶ್ವರಿ ಕ್ಷೇತ್ರದಿಂದ ಹೊರಬಂದ ವರುಣಾ ಕ್ಷೇತ್ರಕ್ಕೆ ಟಿ.ನರಸೀಪುರ ಮತ್ತು ನಂಜನಗೂಡು ತಾಲ್ಲೂಕುಗಳ ಮೂರು ಹೋಬಳಿಗಳು ಸೇರ್ಪಡೆಯಾದವು. ಅಲ್ಲದೆ ಪ್ರಮುಖ ಲಿಂಗಾಯತ ಮಠವಾಗಿರುವ ಸುತ್ತೂರು ಸೇರಿದಂತೆ ಅನೇಕ ಗ್ರಾಮಗಳನ್ನು ಕೂಡ ವರುಣಾ ಕ್ಷೇತ್ರ ಒಳಗೊಂಡಿದೆ.

ಲಿಂಗಾಯತರು, ದಲಿತರು, ನಾಯಕರು, ಕುರುಬರು ಮತ್ತು ಉಪ್ಪಾರ ಜನಾಂಗವನ್ನು ಹೊಂದಿರುವ ವರುಣಾ ಕ್ಷೇತ್ರ ಸಿದ್ದರಾಮಯ್ಯನವರಿಗೆ ಸುರಕ್ಷಿತ ಕ್ಷೇತ್ರವಾಗಿತ್ತು. 2008 ಮತ್ತು 2013ರಲ್ಲಿ ಬಿಜೆಪಿ ಮತ್ತು ಕೆಜೆಪಿ ಅಭ್ಯರ್ಥಿಗಳನ್ನು ಸುಮಾರು 20,000 ಮತಗಳ ಅಂತರದಿಂದ ಸೋಲಿಸಿದ್ದರು.

ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅವರ ಅಕಾಲಿಕ ಮರಣದಿಂದಾಗಿ ಅವರ ಕಿರಿಯ ಪುತ್ರ ಯತೀಂದ್ರರನ್ನು ಕಣಕ್ಕಿಳಿಸಿದ್ದಾರೆ. ರಾಕೇಶ್ ಇರುತ್ತಿದ್ದರೆ ಅವರು ಸ್ಪರ್ಧಿಸಬೇಕಾಗಿತ್ತು. ಸುಮಾರು 10 ವರ್ಷಗಳ ಕಾಲ ಇಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ತಂದೆಗೆ ನೆರವಾಗಿದ್ದ ರಾಕೇಶ್ ಸಿದ್ದರಾಮಯ್ಯ ನಿಧನ ಅವರ ಕುಟುಂಬಕ್ಕೆ ಭಾರೀ ನಷ್ಟವಾಗಿದೆ. ಇದೀಗ ಅದನ್ನು ತುಂಬಲು ವೃತ್ತಿಯಲ್ಲಿ ವೈದ್ಯರಾಗಿರುವ ಯತೀಂದ್ರ ಅವರನ್ನು ಕಣಕ್ಕಿಳಿಸಿದ್ದಾರೆ.

 ತಾಳ್ಮೆಯ ಮನುಷ್ಯ ಎಂದು ಹೆಸರಾಗಿರುವ ಯತೀಂದ್ರ ಕಳೆದ ಏಳೆಂಟು ತಿಂಗಳುಗಳಿಂದ ಕ್ಷೇತ್ರದಲ್ಲಿ ಸಂಚರಿಸಿ ಜನರಿಗೆ ಹತ್ತಿರವಾಗಲು ಪ್ರಯತ್ನಪಟ್ಟಿದ್ದಾರೆ. ಇಲ್ಲಿ ಸ್ಪರ್ಧಿಸಬೇಕಿದ್ದ ಬಿ.ವೈ.ವಿಜಯೇಂದ್ರ ಅವರ ನಿರ್ಗಮನ ಖಂಡಿತವಾಗಿಯೂ ಬಿಜೆಪಿಗೆ ಭಾರೀ ನಷ್ಟ ಎಂದೇ ಹೇಳಬಹುದು. ಇನ್ನು ಜೆಡಿಎಸ್ ಅಂತೂ ಪೈಪೋಟಿ ನೀಡಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com