

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಜಿದ್ದಾಜಿದ್ದಿನ ಕ್ಷೇತ್ರವಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ನಟ ಕಿಚ್ಚ ಸುದೀಪ್ ಚುನಾವಣಾ ಪ್ರಚಾರ ನಡೆಸಲು ಒಪ್ಪಿಕೊಂಡಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರನ್ನು ಶತಾಯಗತಾಯ ಸೋಲಿಸಲು ಬಹುದೊಡ್ಡ ತಂತ್ರ ಅನುಸರಿಸುತ್ತಿರುವ ಸಿದ್ದರಾಮಯ್ಯ ಕೊನೆಗೂ ಸುದೀಪ್ ಅವರನ್ನು ತಮ್ಮ ಪರ ಪ್ರಚಾರ ಕೈಗೊಳ್ಳಲು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಚ್ಚ ಸುದೀಪ್ ಇದೇ ತಿಂಗಳ 9ರಂದು ಬಾದಾಮಿ ಕ್ಷೇತ್ರದಾದ್ಯಂತ ತೆರಳಿ ಸಿದ್ದರಾಮಯ್ಯನವರ ಪರ ಜನರಲ್ಲಿ ಮತ ಯಾಚನೆ ಮಾಡಲಿದ್ದಾರೆ. ಈ ವಿಷಯನನ್ನು ನಟ ಸುದೀಪ್ ಅವರೇ ಖಚಿತಪಡಿಸಿದ್ದಾರೆ. ಸಿದ್ದರಾಮಯ್ಯನವರನ್ನು ಬಾದಾಮಿ ಕ್ಷೇತ್ರದಲ್ಲಿ ಗೆಲ್ಲಿಸಲು ಜನರ ಮನವೊಲಿಸಲು ಅಂದು ಇಡೀ ದಿನ ಪ್ರಚಾರ ನಡೆಸಲಿದ್ದಾರೆ.
ಅತಿ ಗಣ್ಯ ಮತ್ತು ದೊಡ್ಡ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನಗೆ ಹಲವು ಸಮಯಗಳಿಂದ ಆತ್ಮೀಯರಾಗಿದ್ದರು. ಯಾವುದೇ ವಿಷಯಗಳ ಕುರಿತು ಮಾತುಕತೆ, ಚರ್ಚೆ ನಡೆಸಲು ಹೋಗಿದ್ದಾಗ ಚುನಾವಣೆಗೆ ಮುಂಚೆಯೇ ಮುಖ್ಯಮಂತ್ರಿಯಾಗಿ ಅವರು ನನಗೆ ಕಾಲಾವಕಾಶ ನೀಡಿದ್ದರು. ನಾನು ಅವರ ಮುಂದೆ ತುಂಬಾ ಚಿಕ್ಕವನು. ಅವರ ಮೇಲಿನ ಪ್ರೀತಿ,ಅಭಿಮಾನ ಮತ್ತು ಗೌರವದಿಂದ ಪ್ರಚಾರ ಕಾರ್ಯ ನಡೆಸಲು ಹೋಗುತ್ತಿದ್ದೇನೆಯೇ ಹೊರತು ಹಣಕ್ಕಾಗಿ ಅಥವಾ ಬೇರಾವ ಉದ್ದೇಶಕ್ಕೂ ಅಲ್ಲ. ಇಲ್ಲಿ ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿದೆ. ನಾನು ಪ್ರಚಾರ ನಡೆಸಿದ ಮಾತ್ರಕ್ಕೆ ಸಿದ್ದರಾಮಯ್ಯನವರು ಗೆಲ್ಲುತ್ತಾರೆ ಎಂಬ ಅಹಂ ಕೂಡ ನನ್ನಲ್ಲಿ ಇಲ್ಲ ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ.