
ಚಿತ್ರದುರ್ಗ: ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರಾಗಿರುವ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ 86ರ ಇಳಿವಯಸ್ಸಿನಲ್ಲಿ ಕೂಡ ರಾಜಕೀಯದಲ್ಲಿ ಹೋರಾಡುವ ಹುರುಪು ಹೊಂದಿದ್ದಾರೆ. ಬಿಳಿ ಶರ್ಟ್ ಮತ್ತು ಪ್ಯಾಂಟಿನಲ್ಲಿ ಕಂಗೊಳಿಸುವ ಶಾಮನೂರು ಶಿವಶಂಕರಪ್ಪ ಈ ಬಾರಿ ಕೂಡ ತಮ್ಮ ನೆಚ್ಚಿನ ವಿಲ್ಲಿಸ್ ತೆರೆದ ಜೀಪಿನಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ, ಈ ಬಾರಿಯ ಚುನಾವಣೆಯಲ್ಲಿ ಲಿಂಗಾಯತ ಧರ್ಮ ವಿಚಾರವಲ್ಲ, ಬದಲಾಗಿ ಸಿದ್ದರಾಮಯ್ಯ ಸರ್ಕಾರ ಕೈಗೊಂಡಿರುವ ವಿವಿಧ ಅಭಿವೃದ್ಧಿಪರ ಕ್ರಮಗಳು ಪ್ರಮುಖ ಪಾತ್ರ ವಹಿಸಲಿವೆ ಎನ್ನುತ್ತಾರೆ.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವ ಮುನ್ನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳ ತಮ್ಮ ರಾಜಕೀಯ ಅನುಭವ ಹಂಚಿಕೊಂಡರು.
ಕಳೆದ 5 ವರ್ಷಗಳಲ್ಲಿ ನಿಮ್ಮ ವೃತ್ತಿಯಲ್ಲಿ ರಾಜಕೀಯ ಹೇಗೆ ರೂಪಾಂತರಗೊಂಡಿದೆ?
-ರಾಜಕೀಯ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾಗಿದೆ. ಹಿಂದೆ ಮೌಲ್ಯಾಧಾರಿತ ರಾಜಕೀಯವಿತ್ತು. ಇಂದು ಬೆರಳೆಣಿಕೆಯ ರಾಜಕೀಯ ವ್ಯಕ್ತಿಗಳ ನಿಷ್ಠೆ, ಪ್ರಾಮಾಣಿಕತೆ ಮತ್ತು ಬದ್ಧತೆ ಚುನಾವಣೆಯಲ್ಲಿ ಗೆಲ್ಲುತ್ತದೆ. ಬಹುತೇಕ ರಾಜಕೀಯ ಮುಖಂಡರು ಅನೈತಿಕ ಮಾರ್ಗಗಳ ಮೂಲಕ ಗೆಲುವು ಸಾಧಿಸುತ್ತಾರೆ. ಹಿಂದೆ ರಾಜಕೀಯ ನಾಯಕರು ತಾವು ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುತ್ತಿದ್ದರು. ಇಂದು ಎಲ್ಲವೂ ಹಣದಿಂದ ನಿರ್ಧಾರವಾಗುತ್ತದೆ. ಸಮಗ್ರತೆಯ ಅರ್ಥ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.
ಕಾಂಗ್ರೆಸ್ ಗೆಲ್ಲುತ್ತದೆ ಎಂದು ನೀವು ಹೇಗೆ ಭಾವಿಸುತ್ತೀರಿ?
-ಕಾಂಗ್ರೆಸ್ ಗೆಲ್ಲುತ್ತದೆ, ಅದರಲ್ಲಿ ಸಂಶಯವೇ ಇಲ್ಲ. ಸಿದ್ದರಾಮಯ್ಯ ಸರ್ಕಾರ ಕೈಗೊಂಡಿರುವ ಅಭಿವೃದ್ಧಿಪರ ಕ್ರಮಗಳು ನಮ್ಮ ಅಭ್ಯರ್ಥಿಗಳು ಗೆಲ್ಲಲು ಸಹಾಯವಾಗಲಿದೆ.
ವೀರಶೈವ-ಲಿಂಗಾಯತ ಅಂಶಗಳು ಈ ಚುನಾವಣೆಯಲ್ಲಿ ಪಾತ್ರವಹಿಸಲಿದೆಯೇ?
-ಕರ್ನಾಟಕದ ಮೂರು ದೊಡ್ಡ ಪಕ್ಷಗಳಲ್ಲಿ ವೀರಶೈವ-ಲಿಂಗಾಯತರಿದ್ದಾರೆ. ಮತದಾರರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆ ಮತ ಹಾಕುವ ಆಯ್ಕೆ ಹೊಂದಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾನಮಾನ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ. ವೀರಶೈವ ಮಹಾಸಭಾ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಅದು ಯಾವ ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ. ವೀರಶೈವ ಮಹಾಸಭಾವನ್ನು ರಾಜಕೀಯಕ್ಕೆ ಎಳೆತರುವ ಅಗತ್ಯವಿಲ್ಲ. ಯಾರಿಗೆ ಮತ ಹಾಕಬೇಕೆಂದು ತಿಳಿಯುವಷ್ಟು ಮತದಾರರು ಬುದ್ಧಿವಂತರಾಗಿದ್ದಾರೆ.
ನಿಮಗೆ ಬಿಜೆಪಿಯಿಂದ ಆಹ್ವಾನ ಬಂದಿತ್ತು ಎಂಬ ಊಹಾಪೋಹವಿದೆಯಲ್ಲವೇ?
-ನಾನು ಹುಟ್ಟು ಕಾಂಗ್ರೆಸ್ಸಿಗ. ನನ್ನ ಜೀವನವನ್ನು ಕಾಂಗ್ರೆಸ್ ನಲ್ಲಿ ಕಳೆದಿದ್ದು ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಪಕ್ಷ. ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ.
ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ನಿಮ್ಮ ಗೆಲುವಿಗೆ ಅಂಶಗಳ್ಯಾವುದು?
-ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಪರ ಕೆಲಸಗಳು ನನ್ನ ಗೆಲುವಿಗೆ ಅಂಶಗಳಾಗುತ್ತವೆ. ದೇಶದಲ್ಲಿಯೇ ದಾವಣಗೆರೆ ಉತ್ತಮ ನಗರಗಳಲ್ಲಿ ಒಂದಾಗಿದ್ದು ಎಲ್ಲಾ ಮೂಲಭೂತಸೌಕರ್ಯ ಯೋಜನೆಗಳನ್ನು ಸಂಪೂರ್ಣ ಮಾಡಿದ್ದೇವೆ. ಜಿಲ್ಲೆಗೆ ಕೈಗಾರಿಕಾ ಅಭಿವೃದ್ಧಿಗಳನ್ನು ಕೈಗೊಳ್ಳುವ ಯೋಜನೆಯಿದ್ದು ಈ ಮೂಲಕ ಸ್ಥಳೀಯ ಯುವಜನತೆಗೆ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿಯಾಗಿದೆ. ಜನ ನನ್ನ ಮೇಲೆ ನಂಬಿಕೆಯಿಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳುತ್ತೇನೆಂಬ ಭರವಸೆಯಿದೆ. ಜನರಿಗೆ ದಿನಪೂರ್ತಿ ಕುಡಿಯುವ ನೀರು ಒದಗಿಸುವುದು, ಸೊಳ್ಳೆ ಮುಕ್ತ ನಗರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದ್ದು ಇನ್ನೆರಡು ವರ್ಷಗಳಲ್ಲಿ ಆ ಕೆಲಸವನ್ನು ಮಾಡುತ್ತೇವೆ.
ಚುನಾವಣಾ ಪ್ರಚಾರದ ಜೀಪು ಹಳೆಯದೆನಿಸುತ್ತದೆ?
-ವಿಲ್ಲೀಸ್ ಜೀಪ್ ನ್ನು ಅನೇಕ ವರ್ಷಗಳಿಂದ ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದೇನೆ. ತೆರೆದ ಜೀಪ್ ಆಗಿರುವುದರಿಂದ ಜನರನ್ನು ಭೇಟಿ ಮಾಡಿ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ನನಗೆ ಈ ಜೀಪ್ ನಲ್ಲಿ ಪ್ರಚಾರ ಮಾಡುವುದೆಂದರೆ ತುಂಬಾ ಇಷ್ಟ.
Advertisement