2022ಕ್ಕೆ ಎಲ್ಲರನ್ನೊಳಗೊಂಡ ಭವ್ಯ ಭಾರತ ನಿರ್ಮಾಣವೇ ನಮ್ಮ ಕನಸು - ಪ್ರಧಾನಿ ನರೇಂದ್ರಮೋದಿ

ಏಕ್ ಭಾರತ್ ಶ್ರೇಷ್ಟ ಭಾರತ್', ಸಬ್ ಕಾ ಸಾಥ್,ಸಬ್ ಕಾ ವಿಕಾಸ್' ಇದು ಬಿಜೆಪಿಯ ಮೂಲ ಮಂತ್ರ. 2022ಕ್ಕೆ ಎಲ್ಲರನ್ನೊಳಗೊಂಡ ಭವ್ಯ ಭಾರತ ನಿರ್ಮಾಣ ಮಾಡುವುದೇ ನಮ್ಮ ಕನಸು ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ
ಪ್ರಧಾನಿ ನರೇಂದ್ರಮೋದಿ

ಹುಬ್ಬಳ್ಳಿ : ಏಕ್ ಭಾರತ್ ಶ್ರೇಷ್ಟ ಭಾರತ್', ಸಬ್ ಕಾ ಸಾಥ್,ಸಬ್ ಕಾ ವಿಕಾಸ್' ಇದು ಬಿಜೆಪಿಯ ಮೂಲ ಮಂತ್ರ.  2022ಕ್ಕೆ  ಎಲ್ಲರನ್ನೊಳಗೊಂಡ  ಭವ್ಯ ಭಾರತ ನಿರ್ಮಾಣ ಮಾಡುವುದೇ ನಮ್ಮ ಕನಸು ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಬಿಜೆಪಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, 70  ವರ್ಷಗಳಾದರೂ ದೇಶದಲ್ಲಿ ಇನ್ನೂ 4 ಕೋಟಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಒದಗಿಲ್ಲ. ಇದು ಕಾಂಗ್ರೆಸ್ ನ ವೈಫಲ್ಯತೆಯ ಸಾಕ್ಷಿ ಅಲ್ಲವೇ? ಸೌಭಾಗ್ಯ ಯೋಜನೆ ಅಡಿಯಲ್ಲಿ ನಾವು ಈ ಎಲ್ಲ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕೊಡಲಿದ್ದೇವೆ  ಎಂದು ಹೇಳಿದರು.

ಹವಾಯಿ ಚಪ್ಪಲಿ ಧರಿಸುವವರೂ ಕೂಡಾ ವಿಮಾನದಲ್ಲಿ ಪ್ರಯಾಣ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ರೇಲ್ವೆಯ AC ಬೋಗಿಯಲ್ಲಿ ಪ್ರಯಾಣಿಸಿದ್ದಕ್ಕಿಂತ ಜಾಸ್ತಿ ಜನ ಕಡಿಮೆ ಖರ್ಚಿನ ವಿಮಾನಯಾನ ಮಾಡಿದ್ದಾರೆ. ಇದು ಭಾರತ ಬದಲಾಗುತ್ತಿರುವದಕ್ಕೆ ದೊಡ್ಡ ಸಾಕ್ಷಿ  ಎಂದರು.

ಕಾಂಗ್ರೆಸ್ ನ ಪಾಲಿಗೆ ಪ್ರಜಾಪ್ರಭುತ್ವವೆಂದರೆ, ಅದು ಒಂದು ಕುಟುಂಬದ ಸುತ್ತ ಮಾತ್ರ ಗಿರಕಿ ಹೊಡೆಯುತ್ತದೆ. ಆ ಒಂದು ಕುಟುಂಬದ ಪರಿಧಿಯಾಚೆ ಅವರ ಚಿಂತನೆಗಳು ಶುರುವಾಗುವುದೇ ಇಲ್ಲ. ಆದರೆ, ನಮ್ಮ ಗಮನ ಇಡೀ ಭಾರತವನ್ನು ಕುಟುಂಬವೆಂದು ತಿಳಿದುಕೊಂಡು ಮುನ್ನಡೆಯುವದಾಗಿದೆ  ಎಂದರು.

ಅಡಿಕೆಯನ್ನು ಹಾನಿಕಾರಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಲು ಕಾಂಗ್ರೆಸ್ ಅಫಿಡವಿಟ್ ಸಲ್ಲಿಸಿ ಅಡಕೆ ಬೆಳೆಗಾರರನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಮಾಡಿತ್ತು. ಆದರೆ, ಯಡಿಯೂರಪ್ಪನವರ ಹೋರಾಟದ ಫಲದಿಂದ ಅವರ ಪ್ರಯತ್ನ ಸಫಲವಾಗಲಿಲ್ಲ ಎಂದು ತಿಳಿಸಿದರು.

ಸೋನಿಯಾಗಾಂಧಿ, ರಾಹುಲ್ ಗಾಂಧಿ  ವಿರುದ್ಧ 5 ಸಾವಿರ ಕೋಟಿ ರೂಪಾಯಿ ವಂಚಿಸಿರುವ ಆರೋಪವಿದೆ. ಕೋರ್ಟ್ ನಿಂದ ಜಾಮೀನು ಪಡೆದು ಹೊರಗಿದ್ದಾರೆ.ಅಂಥ ಮಹಾನುಭಾವರು ಎಲ್ಲ ಮೊಕದ್ದಮೆಗಳಲ್ಲಿ ಕೋರ್ಟ್ ನಿಂದ ಮುಕ್ತಿ ಪಡೆದ ಯಡಿಯೂರಪ್ಪನವರ ಬಗ್ಗೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮೇ 15 ರಂದು ಬಿಜೆಪಿ ಪರವಾಗಲಿರುವ ಫಲಿತಾಂಶವನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವೇ ಆಗುವದಿಲ್ಲ.ಅದಕ್ಕೇ, ನಾನು ಕಾಂಗ್ರೆಸ್ ಗೆ ಸಲಹೆ ನೀಡಲಿಚ್ಛಿಸುತ್ತೇನೆ. ಕಹಿ ಸುದ್ದಿ ಬರುವದಂತೂ ನಿಶ್ಚಿತ, ಅದಕ್ಕೇ ಸಿಹಿಯಾದ ಧಾರವಾಡ ಪೇಢಾ ತಿಂದು ಸೋಲನ್ನು ಮರೆಯಿರಿ ಎಂದು ನರೇಂದ್ರಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com