
ಬೆಂಗಳೂರು: ರಾಜ್ಯ ಚುನಾವಣೆಗೂ ಮುನ್ನ ಮುಂದಿನ ಮುಖ್ಯಮಂತ್ರಿಯಾಗುವ ವಿಶ್ವಾಸದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಇದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ಸಿಗರೇ ಸೋಲಿಸಲಿದ್ದಾರೆ.
ಅಕ್ರಮ ಗಣಿಗಾರಿಕೆ ಹಗರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿದ ಯಡಿಯೂರಪ್ಪ, ಗೆಲುವಿನ ಅಂಶಗಳಿಗಾಗಿ ರೆಡ್ಡಿ ಸೋದರರಿಗೆ ಟಿಕೆಟ್ ನೀಡಲಾಗಿದೆ. ಹಿಂದಿನದ್ದನ್ನು ಮರೆತು ಮುಂದಿನ ದಿನಗಳ ಬಗ್ಗೆ ಯೋಚಿಸಬೇಕು. ರೆಡ್ಡಿ ಸೋದರರಿಗೆ ಜನರ ಬೆಂಬಲವಿದೆ ಎಂದು ಹೇಳಿದರು.
ಬಿಜೆಪಿ ಯಾವ ಮುಸ್ಲಿಂ ರಾಜಕೀಯ ಮುಖಂಡರಿಗೂ ಟಿಕೆಟ್ ನೀಡದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಮುಸಲ್ಮಾನರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗುವುದು. ಗೆಲುವಿನ ಅಂಶವನ್ನಿಟ್ಟುಕೊಂಡು ಟಿಕೆಟ್ ನೀಡಲಾಗಿದೆ. ಇದರಲ್ಲಿ ಯಾವ ಮುಸ್ಲಿಂ ಅಭ್ಯರ್ಥಿಗಳಿಲ್ಲ ಎಂದರು.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ರಾಜ್ಯ ಬಿಜೆಪಿ ಮತ್ತು ರಾಷ್ಟ್ರ ನಾಯಕರ ಮಧ್ಯೆ ಭಿನ್ನಾಭಿಪ್ರಾಯವುಂಟಾಗಿರುವ ಬಗೆಗಿನ ಊಹಾಪೋಹಗಳನ್ನು ತಳ್ಳಿಹಾಕಿರುವ ಯಡಿಯೂರಪ್ಪ, ತಾವು ಸೂಚಿಸಿದ ಹೆಸರುಗಳು ಮತ್ತು ಅಮಿತ್ ಶಾ ಸಮೀಕ್ಷೆಯಲ್ಲಿ ಅನುಮೋದನೆಗೊಂಡ ಅಭ್ಯರ್ಥಿಗಳ ಹೆಸರುಗಳು ಶೇಕಡಾ 95ರಷ್ಟು ಹೊಂದಿಕೆಯಾಗುತ್ತಿದ್ದವು. ತಮ್ಮ ಪುತ್ರ ವಿಜಯೇಂದ್ರಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿರುವುದು ಪಕ್ಷದ ತೀರ್ಮಾನ. ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಅವರ ಪುತ್ರ ಒಟ್ಟಿಗೆ ಸ್ಪರ್ಧಿಸಬಾರದು ಎಂದು ಪಕ್ಷದ ಹಿರಿಯ ನಾಯಕರು ತೀರ್ಮಾನಿಸಿದರು ಎಂದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಅವರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿದೆ ಎಂದರು. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ವಿರುದ್ಧ ಮಹದಾಯಿ ನದಿ ನೀರಿನ ವಿವಾದ ಕುರಿತು ನರೇಂದ್ರ ಮೋದಿಯವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವುದಾಗಿ ಭರವಸೆ ನೀಡಿದರು.
Advertisement