ಮತದಾರರನ್ನು ಸೆಳೆಯಲು ಅಭ್ಯರ್ಥಿಗಳಿಂದ ನಗದು, ಸೀರೆ, ವಸ್ತುಗಳ ಭರ್ಜರಿ ಉಡುಗೊರೆ

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಪ್ರಮುಖ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಮತದಾರರನ್ನು ಓಲೈಸಲು ರಾಜಕೀಯ ನಾಯಕರು ಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ಕಳುಹಿಸುತ್ತಿದ್ದಾರೆ. ಹಲವು ಕಡೆಗಳಲ್ಲಿ ಅಧಿಕಾರಿಗಳು ನಗದನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಅವು ಅತ್ಯಲ್ಪ ಮಾತ್ರ ಎನ್ನುತ್ತಾರೆ ಹಣಕಾಸು ವಿಶ್ಲೇಷಕರು.

ಕಳೆದ ತಿಂಗಳು ನೂರಾರು ಕೋಟಿ ರೂಪಾಯಿಗಳನ್ನು ನೆರೆ ರಾಜ್ಯಗಳಿಂದ ವೈಯಕ್ತಿಕ ಖಾತೆದಾರರಿಂದ ತೆಗೆಯಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರಗಳಿಂದಲೂ 15 ದಿನಗಳ ಹಿಂದೆ ಕರ್ನಾಟಕಕ್ಕೆ ಹಣ ವರ್ಗಾವಣೆಯಾಗಿದೆ. ತಾಲ್ಲೂಕು ಮತ್ತು ಗ್ರಾಮ ಮಟ್ಟದ ಪಕ್ಷದ ಕಾರ್ಯಕರ್ತರ ಖಾತೆಗಳ ಮೂಲಕ ನಗದುಗಳನ್ನು ವರ್ಗಾಯಿಸಲಾಗಿದೆ. ದುರದೃಷ್ಟವೆಂದರೆ ದಾಖಲೆಗಳಿಲ್ಲದ ಹಣವನ್ನು ಪತ್ತೆಹಚ್ಚಲು ಆದಾಯ ತೆರಿಗೆ ಇಲಾಖೆಗೆ ಸಾಧ್ಯವಾಗುತ್ತಿಲ್ಲ.

ಚುನಾವಣಾಧಿಕಾರಿಗಳು ಹೇಳುವಂತೆ, ನಗದುಗಳ ಮೂಲಕ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳು ತಮ್ಮ ನಂಬುಗೆಯ ಬೆಂಬಲಿಗರ ಖಾತೆಗಳಿಗೆ ನಗದುಗಳನ್ನು ನೇರವಾಗಿ ವರ್ಗಾಯಿಸುತ್ತಿದ್ದಾರೆ. ನಂತರ ಅವರು ವಿವಿಧ ದಿನಾಂಕಗಳಲ್ಲಿ ಎಟಿಎಂ ಮೂಲಕ ಹಣವನ್ನು ತೆಗೆಯುತ್ತಾರೆ. ನಿರ್ದಿಷ್ಟ ದಿನಗಳಲ್ಲಿ ಖಾತೆಗಳಿಂದ ಎಟಿಎಂ ಮೂಲಕ ಹಣ ತೆಗೆದು ಮತದಾರರಿಗೆ ವೈಯಕ್ತಿಕವಾಗಿ ಅಥವಾ ಕುಟುಂಬ ಮೂಲಕ ಹಣ ವಿತರಿಸುತ್ತಾರೆ.

ನಗರ ಭಾಗಗಳಲ್ಲಿ ಪೇಟಿಎಂ ಮೂಲಕ ಕೂಡ ಹಣ ವರ್ಗಾಯಿಸಲಾಗುತ್ತಿದೆ. ಪ್ರತಿ ಮತದಾರರಿಗೆ 1 ಸಾವಿರದಿಂದ ಮೂರೂವರೆ ಸಾವಿರಗಳವರೆಗೆ ನೀಡಲಾಗುತ್ತದೆ. ಇದುವರೆಗೆ ಚುನಾವಣಾಧಿಕಾರಿಗಳು 115 ಕೋಟಿ ರೂಪಾಯಿಗಿಂತಲೂ ಅಧಿಕ ಬೆಲೆಬಾಳುವ ನಗದು, ಮದ್ಯ ಮತ್ತು ಚಿನ್ನಗಳನ್ನು ವಶಪಡಿಸಿಕೊಂಡಿದ್ದು ರಾಜ್ಯದ ಮೂಲೆಮೂಲೆಗಳಿಗೆ ಸಾವಿರಗಳಿಂದ ಕೋಟ್ಯಂತರ ರೂಪಾಯಿಗಳವರೆಗೆ ಹಣ ಕಳುಹಿಸಲಾಗಿದೆ. ಕೆಲವು ಅಭ್ಯರ್ಥಿಗಳು ಈಗಾಗಲೇ ಮತದಾರರಿಗೆ ಉಡುಗೆಗಳನ್ನು ನೀಡಿದ್ದು ಇನ್ನು ಕೆಲವರು ಕಳೆದ ಮೂರ್ನಾಲ್ಕು ದಿನಗಳಲ್ಲಿ ಹಂಚಿದ್ದಾರೆ.

ಸೀರೆ, ಲಂಚಗಳ ಮೂಲಕ ಮತದಾರರ ಓಲೈಕೆ: ಮತದಾರರಿಗೆ ನಗದು ಮಾತ್ರವಲ್ಲದೆ ಮಹಿಳೆಯರಿಗೆ ಸೀರೆ, ಮನೆಗೆ ಉಪಯೋಗವಾಗುವ ವಸ್ತುಗಳನ್ನು ನೀಡಿ ಆಮಿಷವೊಡ್ಡಲಾಗುತ್ತಿದೆ. ಸೂರತ್, ಅಹಮದಾಬಾದ್ ಗಳಿಂದ ಹತ್ತಿಯ ಮತ್ತು ಪಾಲಿಸ್ಟರ್ ಸೀರೆಗಳು ಬರುತ್ತಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ನ ಹಿರಿಯ ಶಾಸಕರೊಬ್ಬರು ತಮ್ಮ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅಕ್ರಮವಾಗಿ ಮಧ್ಯಮ ಮತ್ತು ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಸೀರೆ ವಿತರಿಸಿದ್ದರು.

ಷರತ್ತುಬದ್ಧ ಉಡುಗೊರೆಗಳು:ಕೊಪ್ಪಳದಲ್ಲಿ ಮತದಾರರಿಗೆ ರಾಜಕೀಯ ಮುಖಂಡರು ಷರತ್ತುಬದ್ಧ ಗಿಫ್ಟ್ ಗಳನ್ನು ನೀಡುತ್ತಿದ್ದಾರೆ. ಮೂಲಗಳ ಪ್ರಕಾರ, ಕೆಲವು ಕಡೆಗಳಲ್ಲಿ ಯುವ ಮತದಾರರನ್ನು ಸೆಳೆಯಲು ಬೈಕ್ ಗಳನ್ನು ನೀಡಲಾಗಿದೆ. ವಾಹನಗಳ ಫೈನಾನ್ಸರ್ ಮೂಲಕ ಖಾತರಿ ಪಡೆಯಲಾಗುತ್ತಿದೆ. ಮತದಾರರಿಂದ ತಮ್ಮ ಪರವಾಗಿ ಮತ ಬಂದರೆ ಮಾತ್ರ ಅವರಿಗೆ ಹಣ ನೀಡಲಾಗುತ್ತದೆ. ಇಲ್ಲದಿದ್ದರೆ ಮತದಾರರಿಂದ ಹಣ ವಾಪಸ್ ಪಡೆಯಲಾಗುತ್ತದೆ. ಈ ಷರತ್ತಿನ ಮೇಲೆ ನಂಬುಗೆಯ ಮತದಾರರಿಗೆ ಮಾತ್ರ ದುಬಾರಿ ಗಿಫ್ಟ್ ನೀಡಲಾಗುತ್ತಿದೆ.

ರಿಯಲ್ ಎಸ್ಟೇಟ್ ಕಂಪೆನಿಗಳು ಭಾಗಿ:
ಇನ್ನು ಬೊಮ್ಮನಹಳ್ಳಿ, ಸರ್ಜಾಪುರ, ವೈಟ್ ಫೀಲ್ಡ್, ಹೆಚ್ ಎಸ್ಆರ ಲೇ ಔಟ್ ಮತ್ತು ಬೆಂಗಳೂರಿನ ಇತರ ಭಾಗಗಳಲ್ಲಿ ಅಭ್ಯರ್ಥಿಗಳ ಪರವಾಗಿ ರಿಯಲ್ ಎಸ್ಟೇಟ್ ಏಜೆನ್ಸಿಗಳು ಹಗಲಿರುಳು ಕೆಲಸ ಮಾಡುತ್ತಿವೆ. ಮತದಾರರ ಮನೆಬಾಗಿಲಿಗೆ ಪೆನ್ಸಿಲ್ ಬಾಕ್ಸ್ ಗಳಿಂದ ಹಿಡಿದು ಪಾತ್ರೆಗಳವರೆಗೆ ಗಿಫ್ಟ್ ಗಳನ್ನು ನೀಡಲಾಗುತ್ತಿದೆ.

ಚುನಾವಣಾ ಪ್ರತಿನಿಧಿಗಳ ಸಹಾಯವಿಲ್ಲದೆ ಬೆಂಗಳೂರಿನಲ್ಲಿ ಮನೆ, ಕಟ್ಟಡ ನಿರ್ಮಿಸಲು ಅನುಮತಿ ಸಿಗುವುದು ಕಷ್ಟ. ಅದು ಕಾರ್ಪೊರೇಟರ್ ಗಳಾಗಿರಲಿ ಅಥವಾ ಶಾಸಕರಾಗಿರಲಿ, ಅವರು ನಮಗೆ ಮಾಡಿರುವ ಉಪಕಾರಕ್ಕೆ ಪ್ರತ್ಯುಪಕಾರ ಮಾಡುವ ಸಂದರ್ಭವಿದು ಎನ್ನುತ್ತಾರೆ ರಿಯಲ್ ಎಸ್ಟೇಟ್ ಏಜೆನ್ಸಿ ಮಾಲಿಕರು.

ಇನ್ನು ಮತದಾರರಿಗೆ ಬಾಡೂಟ ನೀಡುವುದು, ನಗದು, ಸಣ್ಣಪುಟ್ಟ ಉಡುಗೊರೆಗಳನ್ನು ನೀಡುವುದು ನಗರ ಸೇರಿದಂತೆ ಪಟ್ಟಣ, ಹಳ್ಳಿಗಳಲ್ಲಿ ಕೂಡ ಕಂಡುಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com