ವಿಧಾನಸಭೆ ಚುನಾವಣೆ ಅಂತ್ಯ: ಶೇ.67ರಷ್ಟು ಮತದಾನ, ಮತಯಂತ್ರ ಸೇರಿದ ಅಭ್ಯರ್ಥಿಗಳ ಭವಿಷ್ಯ

ವಿಧಾನಸಭೆ ಚುನಾವಣೆಗೆ ಶನಿವಾರ ರಾಜ್ಯಾದ್ಯಂತ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಗೊಂಡಿದ್ದು, ...
ಹಕ್ಕು ಚಲಾಯಿಸಿದ ಮತದಾರರು
ಹಕ್ಕು ಚಲಾಯಿಸಿದ ಮತದಾರರು
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಶನಿವಾರ ರಾಜ್ಯಾದ್ಯಂತ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಗೊಂಡಿದ್ದು, ಶೇ.67ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 2,636 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ.
2013ರ ವಿಧಾನಸಭೆ ಚುನಾವಣೆಯಲ್ಲಿ ಶೇ.71ರಷ್ಟು ಮತದಾನವಾಗಿತ್ತು, 2008ರಲ್ಲಿ ಶೇ.64ರಷ್ಟು ಮತದಾನವಾಗಿತ್ತು.
ಸಂಜೆ 6 ಗಂಟೆಯವರೆ ಬೆಂಗಳೂರು ನಗರ  - 51, ಕೊಪ್ಪಳ - 70, ಗದಗ - 68, ಚಾಮರಾಜ ನಗರ - 78, ಚಿಕ್ಕಮಗಳೂರು -  70, ಚಿಕ್ಕಬಳ್ಳಾಪುರ - 79, ಚಿತ್ರದುರ್ಗ - 76, ತುಮಕೂರು - 73, ದಕ್ಷಿಣ ಕನ್ನಡ - 73, ದಾವಣಗೆರೆ - 70, ಧಾರವಾಡ-  66, ಬಳ್ಳಾರಿ - 66, ಬಾಗಲಕೋಟೆ - 68, ವಿಜಯಪುರ - 63, ಬೀದರ್ - 59, ಬೆಳಗಾವಿ - 71, ಬೆಂಗಳೂರು ಗ್ರಾಮಾಂತರ - 76, ಮೈಸೂರು-  68, ಮಂಡ್ಯ - 78, ಯಾದಗಿರಿ- 60, ರಾಮನಗರ - 80, ರಾಯಚೂರು - 61, ಹಾವೇರಿ  -76, ಹಾಸನ - 77, ಶಿವಮೊಗ್ಗ -73, ಉಡುಪಿ - 75, ಉತ್ತರ ಕನ್ನಡ - 71, ಕೊಡಗು  - 69, ಕೋಲಾರ - 77, ಗುಲ್ಬರ್ಗಾ -56, ಬೆಂಗಳೂರು (ಉತ್ತರ) -  49, ಬೆಂಗಳೂರು (ದಕ್ಷಿಣ) -  49, ಬೆಂಗಳೂರು (ಗ್ರಾಮಾಂತರ)-  51ರಷ್ಟು ಮತದಾನವಾಗಿದೆ.
ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತಾದರೂ, ಹಲವೆಡೆ ಮತಯಂತ್ರಗಳು ಕೈಕೊಟ್ಟ ಪರಿಣಾಮ ಮತದಾನ ತಡವಾಯಿತು. ಇನ್ನು ಹಲವು ಮತಗಟ್ಟೆಗಳಲ್ಲಿ ವಿದ್ಯುತ್ ಕೈ ಕೊಟ್ಟ ಕಾರಣ ಚುನಾವಣಾ ಸಿಬ್ಬಂದಿ ಗೊಂದಲಕ್ಕೀಡಾದರು. 
ಇನ್ನು ಬೆಂಗಳೂರಿನ ಎರಡು ಕಡೆ ನಕಲಿ ಮತದಾನ ಆರೋಪ ಹಿನ್ನೆಲೆಯಲ್ಲಿ ಬಸವನಗುಡಿ ಕ್ಷೇತ್ರದ ಶ್ರೀನಗರದಲ್ಲಿ ನಾಗಮಂಗಲ ಕ್ಷೇತ್ರಕ್ಕೆ ತೆರಳುತ್ತಿದ್ದ ಬಸ್​ ಅಡ್ಡಗಟ್ಟಿ ಸ್ಥಳೀಯರು ಗಲಾಟೆ ಮಾಡಿದ್ದಾರೆ.
15ನೇ ವಿಧಾನಸಭೆಗೆ ಒಂದೇ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯಾದ್ಯಂತ ಒಟ್ಟು 58,546 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ರಾಜ್ಯದ 224 ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಮಾತ್ರ ಇಂದು ಚುನಾವಣೆ ನಡೆಯುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸುಮಾರು 10 ಸಾವಿರ ವೋಟರ್ ಐಡಿ ಪತ್ತೆಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಇನ್ನು ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಚುನಾವಣೆಯನ್ನು ಸಹ ಮುಂದೂಡಲಾಗಿದೆ.
ಹೊಳೆನರಸಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೇಲೆ ದಾಳಿ
ಹೊಳೆನರಸಿಪುರ ಕ್ಷೇತ್ರದ ಪರಸನಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಪಿ ಮಂಜೇಗೌಡ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಗುಂಪೊಂದು ದಾಳಿ ಮಾಡಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜೆಡಿಎಸ್ ಅಭ್ಯರ್ಥಿ ಎಚ್ ಡಿ ರೇವಣ್ಣ ಕಡೆಯವರು ಎನ್ನಲಾದ ಕೆಲ ಯುವಕರ ಗುಂಪು ಮಂಜೇಗೌಡ ಅವರ ಕಾರನ್ನು ಧ್ವಂಸಗೊಳಿಸಿದ್ದಲ್ಲದೆ, ಅವರನ್ನು ನಿಂದಿಸಿ, ಹಲ್ಲೆ ಯತ್ನಿಸಿದ್ದಾರೆ. ಈ ಸಂಬಂಧ ಮಂಜೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಹಾಸನದ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ಸ್ವಲ್ಪ ಕಾಲ ಮತದಾನಕ್ಕೆ ಅಡಚಣೆ ಉಂಟಾಯಿತು. 
ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಮತದಾನ ಬಹುತೇಕ ಶಾಂತಿಯುತವಾಗಿ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com