ಇವಿಎಂ ಯಂತ್ರ ಅಸಮರ್ಪಕ: ಹೆಬ್ಬಾಳ ಬೂತ್ ನಲ್ಲಿ ಸೋಮವಾರ ಮರು ಮತದಾನ

ಇವಿಎಂ ಯಂತ್ರಗಳ ಅಸಮರ್ಪಕ ಕ್ರಿಯೆಯಿಂದಾಗಿ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಆರ್‌.ಎಂ.ವಿ ಎರಡನೇ ಹಂತದ ಗಾಂಧಿ ವಿದ್ಯಾಲಯ ಕನ್ನಡ ಮತ್ತು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಇವಿಎಂ ಯಂತ್ರಗಳ ಅಸಮರ್ಪಕ ಕ್ರಿಯೆಯಿಂದಾಗಿ ಹೆಬ್ಬಾಳ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯ ಆರ್‌.ಎಂ.ವಿ ಎರಡನೇ ಹಂತದ ಗಾಂಧಿ ವಿದ್ಯಾಲಯ ಕನ್ನಡ ಮತ್ತು ತಮಿಳು ಪ್ರಾಥಮಿಕ ಶಾಲೆಯ ಮರುಮತದಾನ ಸೋಮವಾರ ನಡೆಯಲಿದೆ.
ಮತಯಂತ್ರದಲ್ಲಿ ನಿರ್ದಿಷ್ಟ ಅಭ್ಯರ್ಥಿಯ ಹೆಸರಿನ ಮುಂದಿನ ಚಿಹ್ನೆಯ ಮುಂದಿನ ಗುಂಡಿ ಒತ್ತಿದರೆ, ಅದು ಬೇರೆ ಅಭ್ಯರ್ಥಿಗೆ ಚಲಾವಣೆಯಾಗುತ್ತಿತ್ತು. ವಿವಿಪ್ಯಾಟ್‌ನಲ್ಲೂ ಬೇರೆ ಅಭ್ಯರ್ಥಿಯ ಚಿಹ್ನೆ ಕಾಣಿಸಿಕೊಳ್ಳುತ್ತಿತ್ತು. ಅನೇಕ ಮತದಾರರು ಈ ಬಗ್ಗೆ ದೂರಿದ್ದರು.
ಮತಯಂತ್ರದ ಗುಂಡಿ ಒತ್ತಿದಾಗ ವಿವಿಪ್ಯಾಟ್‌ನಲ್ಲಿ ಅವರು ಮತ ಹಾಕಿದ ಅಭ್ಯರ್ಥಿ ಬದಲು ಬೇರೆ ಪಕ್ಷದ ಚಿಹ್ನೆ ಕಾಣಿಸಿಕೊಂಡಿತು.‘ನಾವು ಗುಂಡಿ ಒತ್ತಿದ ಅಭ್ಯರ್ಥಿಗೆ ಮತ ಚಲಾವಣೆ ಆಗಿಲ್ಲ’ ಎಂದು  ಕೆಲ  ಮತದಾರರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಮತಗಟ್ಟೆ ಅಧಿಕಾರಿಗಳು, ‘ನಿಮಗೆ ಇನ್ನೊಮ್ಮೆ ಮತ ಹಾಕಲು ಅವಕಾಶ ಕೊಡಲಾಗುತ್ತದೆ. ಆದರೆ, ನೀವು ಯಾರಿಗೆ ಮತ ಹಾಕುತ್ತೀರಿ ಎಂದು ಹೇಳಿ, 'ನಮ್ಮ ಸಮ್ಮುಖದಲ್ಲೇ ಗುಂಡಿ ಒತ್ತಬೇಕು. ಒಂದು ವೇಳೆ ನೀವು ಹಾಕಿದ ಅಭ್ಯರ್ಥಿಯ ಚಿಹ್ನೆಯೇ ವಿವಿಪ್ಯಾಟ್‌ನಲ್ಲಿ ಕಾಣಿಸಿಕೊಂಡರೆ ನೀವು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಈ ಸವಾಲು ಸ್ವೀಕರಿಸಲು ಅವರು ಒಪ್ಪಿದ್ದರು. ಅವರು ಎರಡನೇ ಬಾರಿಗೆ ಹಾಕಿದ ಮತವೂ ಬೇರೊಬ್ಬ ಅಭ್ಯರ್ಥಿಗೆ ಚಲಾವಣೆಯಾಗಿತ್ತು.
ಆ ಬಳಿಕ ಮತಗಟ್ಟೆ ಅಧಿಕಾರಿಗಳೇ ಖುದ್ದಾಗಿ ಪರಿಶೀಲಿಸಿದಾಗ ಮತಯಂತ್ರದಲ್ಲಿ ಲೋಪವಿದ್ದುದು ಖಚಿತವಾಯಿತು. ಅಷ್ಟರಲ್ಲಾಗಲೇ 49 ಮತಗಳು ಚಲಾವಣೆಯಾಗಿದ್ದವು. ಬಳಿಕ ಬಿಇಎಲ್‌ ತಂತ್ರಜ್ಞರನ್ನು ಸ್ಥಳಕ್ಕೆ ಕರೆಯಿಸಿ ಪರಿಶೀಲಿಸಿದಾಗಲೂ ಮತಯಂತ್ರದಲ್ಲಿ ಲೋಪವಿರುವುದು ಕಂಡು ಬಂತು. ಬಳಿಕ ಮತದಾನ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಹಕ್ಕು ಚಲಾವಣೆಗಾಗಿ ಮತಗಟ್ಟೆಗೆ ಬಂದವರಿಗೆ ‘ಇಲ್ಲಿನ ಮತ ಯಂತ್ರ ಕೆಟ್ಟು ಹೋಗಿದೆ’ ಎಂದು ಅಧಿಕಾರಿಗಳು ಹಿಂದಕ್ಕೆ ಕಳುಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com