117 ಶಾಸಕರು ಸಹಿ ಮಾಡಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದೇವೆ: ಎಚ್ ಡಿಕೆ

117 ಶಾಸಕರು ಸಹಿ ಮಾಡಿರುವ ಪತ್ರ ಮತ್ತು ಕಾಂಗ್ರೆಸ್ - ಜೆಡಿಎಸ್ ಶಾಸಕಾಂಗ ಪಕ್ಷದಲ್ಲಿ ತೆಗೆದುಕೊಂಡ ನಿರ್ಣಯವನ್ನು ಸಹ....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: 117 ಶಾಸಕರು ಸಹಿ ಮಾಡಿರುವ ಪತ್ರ ಮತ್ತು ಕಾಂಗ್ರೆಸ್ - ಜೆಡಿಎಸ್ ಶಾಸಕಾಂಗ ಪಕ್ಷದಲ್ಲಿ ತೆಗೆದುಕೊಂಡ ನಿರ್ಣಯವನ್ನು ಸಹ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಲ್ಲಿಸಿದ್ದೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.
ಇಂದು ಕಾಂಗ್ರೆಸ್ ನಾಯಕರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ರಾಜಭವನದ ಬಳಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದೇವೆ. ಸುಪ್ರೀಂ ಕೋರ್ಟ್ ಆದೇಶವನ್ನು ಪರಿಶೀಲಿಸಿ ಸಂವಿಧಾನದಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದರು.
ಸಂವಿಧಾನ ಮತ್ತು ಸುಪ್ರೀಂ ಕೋರ್ಟ್​ ತೀರ್ಪಿನ ಅನ್ವಯ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ. ಮಿಜೋರಾಂ, ನಾಗಾಲ್ಯಾಂಡ್​, ತ್ರಿಪುರ ಹಾಗೂ ಗೋವಾ ರಾಜ್ಯಗಳಲ್ಲಾದ ತೀರ್ಮಾನವನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಅದರಂತೆ ಇಲ್ಲೂ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದ್ದು, ನಮ್ಮ ಮನವಿಯನ್ನು ರಾಜ್ಯಪಾಲರು ಒಪ್ಪಿದ್ದಾರೆ. ಆದರೆ ಕಾನೂನು ತಜ್ಷರೊಂದಿಗೆ ಚರ್ಚಿಸಿ, ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇದಕ್ಕು ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು, ಜೆಡಿಎಸ್​ ಗೆ ಸಂಪೂರ್ಣ ಬೆಂಬಲ ಕೊಡಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ನಮ್ಮ ನಿರ್ಣಯವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನ ಎಲ್ಲಾ ಶಾಸಕರು ರಾಜ್ಯಪಾಲರ ಮುಂದೆ ಪರೇಡ್ ನಡೆಸಲು ಮುಂದಾಗಿದ್ದರು. ಆದರೆ ಎಲ್ಲಾ ಶಾಸಕರ ಭೇಟಿಗೆ ಅನುಮತಿ ನಿರಾಕರಿಸಿದ ರಾಜ್ಯಪಾಲರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ತಲಾ ಹತ್ತು ಶಾಸಕರಿಗೆ ಮಾತ್ರ ಅವಕಾಶ ನೀಡಿದರು.
ಈ ಮಧ್ಯೆ, ರಾಜಭವನದೊಳಗೆ ಎಲ್ಲ ಶಾಸಕರಿಗೂ ಪ್ರವೇಶ ನಿರಾಕರಿಸಿದ್ದನ್ನು ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com