

ಬೆಂಗಳೂರು; ಕರ್ನಾಟಕ ಸರ್ಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಹವಣಿಸುತ್ತಿರುವ ಸಂದರ್ಭದಲ್ಲಿ, ಮತದಾನವಾಗದಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಜಯನಗರ ಕ್ಷೇತ್ರಗಳ ಮೇಲೆ ಮೂರು ಪಕ್ಷಗಳ ಕಣ್ಣು ನೆಟ್ಟಿವೆ.
ಸರ್ಕಾರ ರಚನೆಗೆ 112 ಸಂಖ್ಯೆಗೆ ಏರಲು ಬಹುಮತ ಸಾಬೀತುಪಡಿಸಲು ಪಕ್ಷಗಳು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಎರಡು ಕ್ಷೇತ್ರಗಳ ಗೆಲುವು ಭಾರೀ ಬದಲಾವಣೆಯನ್ನು ತರಲಿದೆ.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಸಾವಿರಾರು ನಕಲಿ ಗುರುತು ಪತ್ರ ಸಿಕ್ಕಿದ ಹಿನ್ನೆಲೆಯಲ್ಲಿ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಮತಾದನವನ್ನು ಮೇ 28ಕ್ಕೆ ಮುಂದೂಡಲಾಗಿದೆ. ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯ್ ಕುಮಾರ್ ಸಾವಿನ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ. ಈಗ 222 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38 ಹಾಗೂ ಪಕ್ಷೇತರರು 2 ಸ್ಥಾನಗಳಲ್ಲಿ ಜಯಭೇರಿ ಬಾರಿಸಿವೆ.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆದ್ದುಕೊಳ್ಳುವುದು ಪಕ್ಷಕ್ಕೆ ಮುಖ್ಯವಾಗುತ್ತದೆ. ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಈ ಎರಡು ಕ್ಷೇತ್ರಗಳ ಮೇಲೆ ಬಿಜೆಪಿ ಮತ್ತು ಕಾಂಗ್ರೆಸ್ ಗಳು ಮುಖ್ಯವಾಗಿ ಕಣ್ಣು ನೆಟ್ಟಿವೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ಪಿ.ಸದಾಶಿವ, ಪ್ರತಿ ಕ್ಷೇತ್ರಗಳು ನಮಗೆ ಮುಖ್ಯವಾಗುತ್ತದೆ. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾವಾಗ ಮತದಾನ ಎಂಬುದು ನಮಗೆ ಗೊತ್ತಿಲ್ಲ. ಆದರೆ ರಾಜರಾಜೇಶ್ವರಿ ನಗರದಲ್ಲಿ ಹಿಂದಿನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ. ಸದ್ಯ ನಮಗೆ ಸರ್ಕಾರ ರಚನೆ ಗುರಿಯಾಗಿದೆ ಎನ್ನುತ್ತಾರೆ.