ಬಿಜೆಪಿಗೆ ಸಾಕಷ್ಟು ಶಾಸಕರ ಬೆಂಬಲ ಸಿಗುವುದಿಲ್ಲ, ನಾವೇ ಸರ್ಕಾರ ರಚಿಸುತ್ತೇವೆ: ಕಾಂಗ್ರೆಸ್ ನಾಯಕರು

ಬಿಜೆಪಿಗೆ ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರ ಬೆಂಬಲ ಸಿಗುವುದಿಲ್ಲ. ಸದನ ಪರೀಕ್ಷೆಯಲ್ಲಿ ....
ಮಲ್ಲಿಕಾರ್ಜುನ ಖರ್ಗೆ-ಗುಲಾಂ ನಬಿ ಆಜಾದ್
ಮಲ್ಲಿಕಾರ್ಜುನ ಖರ್ಗೆ-ಗುಲಾಂ ನಬಿ ಆಜಾದ್

ಬೆಂಗಳೂರು: ಬಿಜೆಪಿಗೆ ಸರ್ಕಾರ ರಚನೆಗೆ ಬೇಕಾದಷ್ಟು ಶಾಸಕರ ಬೆಂಬಲ ಸಿಗುವುದಿಲ್ಲ. ಸದನ ಪರೀಕ್ಷೆಯಲ್ಲಿ ನಾವು ಗೆದ್ದು ಸರ್ಕಾರ ರಚಿಸಲಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಬಹುಮತ ಸಾಬೀತುಪಡಿಸಲು ಎಷ್ಟೇ ಪ್ರಯತ್ನಿಸಿದರೂ ಕೂಡ ಅದು ಸೋಲಲಿದೆ. ಯಡಿಯೂರಪ್ಪನವರ ಕನಸು ಭಗ್ನವಾಗಲಿದೆ ಎಂದು ಹೇಳಿದರು.

ಶಾಸಕರ ಬೆಂಬಲ ಸಂಖ್ಯೆ ಬಿಜೆಪಿಗೆ ವಿರುದ್ಧವಾಗಿದ್ದು ನಮ್ಮ ಪರವಾಗಿದೆ. ಶಾಸಕರ ಒಲವು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪರವಾಗಿದೆ. ನಾವೇ ಸರ್ಕಾರ ರಚಿಸಲಿದ್ದೇವೆ ಎಂದು ಕಾಂಗ್ರೆಸ್ ನ ಮತ್ತೊಮ್ಮ ಹಿರಿಯ ನಾಯಕ ಗುಲಾಂ ನಬಿ ಆಜಾದ್ ತಿಳಿಸಿದ್ದಾರೆ.

ಮಾಜಿ ಗೃಹ ಸಚಿವ ಕಾಂಗ್ರೆಸ್ ನ ಮತ್ತೊಬ್ಬ ನಾಯಕ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿ ಎಷ್ಟೇ ಕುತಂತ್ರ ನಡೆಸಿದರು ಕೂಡ ಅವರಿಗೆ 104ಕ್ಕಿಂತ ಹೆಚ್ಚಿನ ಶಾಸಕರ ಬೆಂಬಲ ಸಿಗುವುದಿಲ್ಲ. ಆಗ ಸರ್ಕಾರ ಬಿದ್ದು ಹೋಗುತ್ತದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆಟ ಇಲ್ಲಿ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ ಮತ್ತು ಅಮಿತ್ ಶಾ ಗವರ್ನರ್ ಅವರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ತಮಗೆ ಬೇಕಾದಂತೆ ವಾಮಮಾರ್ಗದಿಂದ ಕರ್ನಾಟಕದಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಅದಕ್ಕೆ ಸುಪ್ರೀಂ ಕೋರ್ಟ್ ತಡೆಯೊಡ್ಡಿದೆ. ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಅವರ ನೇಮಕ ಕೂಡ ಅಸಮರ್ಪಕವಾಗಿದೆ. ಅವರಿಗಿಂತ ಹಿರಿಯ ಶಾಸಕರು ಇದ್ದರೂ ಅವರನ್ನು ಕಡೆಗಣಿಸಿ ಬೋಪಯ್ಯ ಅವರಿಗೆ ಹಂಗಾಮಿ ಸ್ಪೀಕರ್ ಹುದ್ದೆ ನೀಡಿರುವ ಉದ್ದೇಶವೇನು ಎಂದು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

ಶಾಸಕ ಆನಂದ್ ಸಿಂಗ್ ನರ್ಮ ಸಂಪರ್ಕದಲ್ಲಿದ್ದಾರೆ, ಅವರು ಇಂದು ಖಂಡಿತವಾಗಿಯೂ ವಿಧಾನಸೌಧಕ್ಕೆ ಬರುತ್ತಾರೆ ಮತ್ತು ನಮ್ಮ ಪರವಾಗಿ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com