
ಬೆಂಗಳೂರು: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಿದ್ಧರಾಗಿದ್ದರೂ ಕೂಡ, ಮೈತ್ರಿಸರ್ಕಾರ ರಚನೆಯ ಮುಂದಿನ ಸವಾಲುಗಳು ಮತ್ತು ಪಕ್ಷದೊಳಗಿನ ಸಂಕಷ್ಟದ ಹಾದಿಗಳ ಬಗ್ಗೆ ಕಾಂಗ್ರೆಸ್ ನಾಯಕರು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ, ಮಂತ್ರಿ ಸ್ಥಾನ ಸಿಗದೇ ಹೋದರೆ ಮಾನಸಿಕವಾಗಿ ಎದುರಿಸಲು ಹಲವು ಕಾಂಗ್ರೆಸ್ ನಾಯಕರು ಸನ್ನದ್ಧರಾಗಿದ್ದು, ಇನ್ನು ಕೆಲವರು ಮೈತ್ರಿಯಿಂದಾಗಿ ಆಗುವ ಸಮಸ್ಯೆಗಳ ಕುರಿತು ಒಪ್ಪಿಕೊಂಡಿದ್ದಾರೆ. ಅಧಿಕಾರ ಹಂಚಿಕೆ, ಹಿರಿತನ, ಪರಂಪರೆಯನ್ನು ನೋಡಿಕೊಂಡು ಎರಡೂ ಪಕ್ಷಗಳಲ್ಲಿ ಸಚಿವ ಸ್ಥಾನ ಯಾರ್ಯಾರಿಗೆ ನೀಡಬೇಕೆಂಬುದರ ಬಗ್ಗೆ ಭಿನ್ನಾಭಿಪ್ರಾಯ ಮೂಡುವುದು ಸಹಜ, ಹೀಗಾಗಿ ಮುಂದಿನ ದಿನಗಳು ಕಠಿಣವಾಗಿವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಮುಂದಿನ ದಿನಗಳಲ್ಲಿನ ಹಾದಿ ಕಠಿಣವಾಗಿದೆ, ಪರಿಸ್ಥಿತಿಗಳನ್ನು ಎದುರಿಸಬೇಕಾದ ಸವಾಲುಗಳು ಸಾಕಷ್ಟಿರುತ್ತವೆ, ಆದರೂ ಒಟ್ಟಾಗಿ ಕುಳಿತು ನಾವು ಕೆಲಸ ಮಾಡಬೇಕಾಗಿದೆ. ನಮ್ಮ ಈ ಹೊಂದಾಣಿಕೆ ವಿರುದ್ಧ ರಾಜ್ಯದ ಸಾಕಷ್ಟು ಜನರ ಅಸಮಾಧಾನವಿದೆ ಎನ್ನುತ್ತಾರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್.
ಕಾಂಗ್ರೆಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಇರುವುದನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಗೆ ಹೆಚ್ಚು ಸಂಪುಟ ಸಚಿವ ಸ್ಥಾನ ನೀಡಬೇಕಾಗಿದೆ ಎನ್ನುತ್ತಾರೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ.
ಸಚಿವ ಸ್ಥಾನ ಹಂಚಿಕೆಯಲ್ಲಿ ಉಂಟಾಗಬಹುದಾದ ಭಿನ್ನಾಭಿಪ್ರಾಯಗಳನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಹೆಚ್ ಡಿ ಕುಮಾರಸ್ವಾಮಿಯವರು ನಿನ್ನೆ ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದು ನಾಳೆ ಪ್ರಮಾಣವಚನ ಸ್ವೀಕಾರಕ್ಕೆ ಮುನ್ನ ಕಾಂಗ್ರೆಸ್ ನ ರಾಷ್ಟ್ರ ನಾಯಕರ ಜೊತೆ ಸೇರಿ ಸಮನ್ವಯ ಸಭೆ ನಡೆಸಿ ಯಾರ್ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂಬುದರ ಕುರಿತು ಚರ್ಚೆ ನಡೆಸಲಿದ್ದಾರೆ.
ಕಳೆದ ಮೂರು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನಾವು ಒಟ್ಟಾಗಿ ಆಡಳಿತ ನಡೆಸುತ್ತಿದ್ದೇವೆ. ಎಲ್ಲರೂ ಸಚಿವರಾಗಲು ಸಾಧ್ಯವಿಲ್ಲ, ಎರಡೂ ಪಕ್ಷಗಳಿಂದ ತ್ಯಾಗ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಕೂಡ ಹೇಳಿದ್ದರು.
ಮೈತ್ರಿಕೂಟದಲ್ಲಿ ಈಗಾಗಲೇ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ ಎಂಬ ವಿಚಾರವನ್ನು ಹೆಚ್ ಡಿ ಕುಮಾರಸ್ವಾಮಿಯವರು ತಳ್ಳಿ ಹಾಕಿದ್ದಾರೆ.
Advertisement