ನಮ್ಮದು ಸ್ಥಿರ ಮೈತ್ರಿ ಸರ್ಕಾರ; ಇತಿಮಿತಿಯಲ್ಲೇ ಎಲ್ಲಾ ಭರವಸೆ ಸಾಕಾರಕ್ಕೆ ಯತ್ನ: ಸಿಎಂ ಹೆಚ್‏ಡಿ ಕುಮಾರಸ್ವಾಮಿ

ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಇತಿಮಿತಿಯಲ್ಲೇ ಎಲ್ಲಾ ಭರವಸೆ ಸಾಕಾರಕ್ಕೆ ಪ್ರಯತ್ನಿಸಿ, ದೇಶಕ್ಕೆ ಮಾದರಿಯಾಗುವಂತಹ ಸ್ಥಿರ ಸುಭದ್ರ ಸರ್ಕಾರವನ್ನು ಮುನ್ನಡೆಸುವುದಾಗಿ ನೂತನ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ

ಬೆಂಗಳೂರು : ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ  ಇತಿಮಿತಿಯಲ್ಲೇ ಎಲ್ಲಾ ಭರವಸೆ ಸಾಕಾರಕ್ಕೆ ಪ್ರಯತ್ನಿಸಿ, ದೇಶಕ್ಕೆ ಮಾದರಿಯಾಗುವಂತಹ ಸ್ಥಿರ ಸುಭದ್ರ  ಸರ್ಕಾರವನ್ನು ಮುನ್ನಡೆಸುವುದಾಗಿ  ನೂತನ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನಾಡಿನ ಜನತೆಗೆ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಆತಂತ್ರ ಫಲಿತಾಂಶ ದೊರೆತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರ  ಜೊತೆಗೆ ಚರ್ಚಿಸಿ   ಮೈತ್ರಿ ಮಾಡಿಕೊಂಡಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು   ಉತ್ತಮ ಆಡಳಿತ ನೀಡುವುದಾಗಿ ಹೇಳಿದರು.

ಸಮಿಶ್ರ ಸರ್ಕಾರದ ಬಗ್ಗೆ ಜನರಿಗೆ ಅನುಮಾನಗಳಿವೆ. ಇದನ್ನು ನನ್ನ ನಡವಳಿಕೆಯಿಂದ ನಿಬಾಯಿಸುತ್ತೇನೆ. ಹೊಂದಾಣಿಕೆ ಸರಿ ಅನ್ನುವಂತೆ ಕಾರ್ಯನಿರ್ವಹಿಸುತ್ತೇನೆ. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ   ನಾಡಿನ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಸದೃಢವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕಿ ಅಧಿನಾಯಕಿ ಸೋನಿಯಾಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತಿತರ ವಿವಿಧ ರಾಜ್ಯಗಳ ಹಾಲಿ , ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು, ವೇದಿಕೆ ಹಂಚಿಕೊಳ್ಳುವ ಮೂಲಕ ಕರ್ನಾಟಕ ಹೊಸ ಬೆಳವಣಿಗೆಗೆ  ಸಾಕ್ಷಿಯಾಗಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ಅವರ ಅಶ್ವಮೇಧ ಕುದುರೆಯನ್ನು ಕಾಂಗ್ರೆಸ್ -ಜೆಡಿಎಸ್  ಕರ್ನಾಟಕದಲ್ಲಿ ಕಟ್ಟಿಹಾಕಿದ್ದು, ಅಮಿತ್ ಶಾ ಅವರು ಜೀವ ಇಲ್ಲದ ಕುದುರೆಯನ್ನು ಇಟ್ಟುಕೊಂಡು ಅಶ್ವಮೇಧ ಯಾಗ  ಮಾಡಬೇಕು ಎಂದು ಲೇವಡಿ ಮಾಡಿದರು.

ರಾಜ್ಯದ ರೈತರ ಸಾಲಮನ್ನಾ ಮಾಡುವ ನಿರ್ಧಾರದಿಂದ ಪಲಾಯನ ಮಾಡುವುದಿಲ್ಲ ಎಂದು ತಿಳಿಸಿದ ಕುಮಾರಸ್ವಾಮಿ,  ಸ್ವತಂತ್ರ ಸರ್ಕಾರ ರಚನೆಯಾದರೆ  24 ಗಂಟೆಯೊಳಗೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ. ಆದರೆ, ಸಂಮಿಶ್ರ ಸರ್ಕಾರದಲ್ಲಿ ಮಿತ್ರ ಪಕ್ಷದ ನೆರವು ಅಗತ್ಯವಾಗಿರುವುದರಿಂದ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ . ಕಾಂಗ್ರೆಸ್ ಹಾಗೂ ಜೆಡಿಎಸ್ ಚುನಾವಣೆ ಪ್ರಣಾಳಿಕೆ ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಸರ್ಕಾರದ ಅಧೀನ ಸಂಸ್ಥೆಗಳು ಮುಕ್ತವಾಗಿ ಕಾರ್ಯನಿರ್ವಹಿಸಲು   ಅವಕಾಶ ನೀಡಲಾಗುವುದು, ಕಾವೇರಿ , ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಅನುಸರಿಸಲಾಗುವುದು ಎಂದು ತಿಳಿಸಿದರು.

ಯಾವುದೇ ಜಾತಿ, ಜನಾಂಗ, ಧರ್ಮಕ್ಕೆ ಸೀಮಿತವಾಗದೆ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ನುಡಿಯಂತೆ ಸರ್ವ ಜನಾಂಗದ ಒಳಿತಿಗಾಗಿ ಕಾರ್ಯನಿರ್ವಹಿಸಲಾಗುವುದು. ಆದರೆ, ಈ ವಿಚಾರದಲ್ಲಿ ಕೆಲ ಮಠಾಧೀಶರು ಇಲ್ಲಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಅಂತಹ ಮಠಾಧೀಶರು ಸಮಾಜ ಸೇವೆ ಬಿಟ್ಟು ರಾಜಕೀಯ ಮಾಡಲಿ ಎಂದು ಸಲಹೆ ನೀಡಿದರು.

ದೇಶಕ್ಕೆ ಮಾದರಿಯಾಗುವಂತಹ ಸರ್ಕಾರ ನೀಡುವುದು ತಮ್ಮ ಸಂಕಲ್ಪವಾಗಿದ್ದು, ಪ್ರತಿಪಕ್ಷಗಳು ರಾಜಕೀಯ ಬದಿಗಿಟ್ಟು, ರಾಜ್ಯದ ಅಭಿವೃದ್ದಿಗಾಗಿ ಪರಸ್ಪರ ಕೈ ಜೋಡಿಸುವಂತೆ   ಹೆಚ್. ಡಿ. ಕುಮಾರಸ್ವಾಮಿ ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com