'ರೆಸಾರ್ಟ್' ರಾಜಕೀಯದ ಬಳಿಕ 'ಶಾಸಕರಿಗೆ ಕೊನೆಗೂ ಬಿಡುಗಡೆ ಭಾಗ್ಯ'

ಕಳೆದ ಮೇ 15ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್...
ರೆಸಾರ್ಟ್ ನಿಂದ ವಿಧಾನಸೌಧಕ್ಕೆ ಶಾಸಕರನ್ನು ಕರೆತರುತ್ತಿರುವ ಸಂಗ್ರಹ ಚಿತ್ರ
ರೆಸಾರ್ಟ್ ನಿಂದ ವಿಧಾನಸೌಧಕ್ಕೆ ಶಾಸಕರನ್ನು ಕರೆತರುತ್ತಿರುವ ಸಂಗ್ರಹ ಚಿತ್ರ

ಬೆಂಗಳೂರು: ಕಳೆದ ಮೇ 15ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಕಾಂಗ್ರೆಸ್-ಜೆಡಿಎಸ್ ನಿಂದ ಗೆದ್ದ ಶಾಸಕರು ಇಷ್ಟು ದಿನ ರೆಸಾರ್ಟ್, ಹೊಟೇಲ್ ಎಂದು ಸುತ್ತಾಡಿಕೊಂಡು ರಾಜಕೀಯ ಮಾಡುತ್ತಿದ್ದವರಿಗೆ ಕೊನೆಗೂ ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗುವ ಮುಕ್ತಿ ಸಿಕ್ಕಿದೆ.

ಹಲವು ಶಾಸಕರು ಗೆದ್ದ ನಂತರ ತಮ್ಮ ಕ್ಷೇತ್ರಕ್ಕೆ ಹೋಗುತ್ತಿರುವುದು ಇದೇ ಮೊದಲ ಬಾರಿ. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯಿದ್ದು ಅದು ಮುಗಿದ ನಂತರ ಆಯಾ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ಹೋಗುವ ನಿರೀಕ್ಷೆಯಿದೆ.

ಮೊನ್ನೆ 15ರಂದು ವಿಧಾನಸಭೆ ಫಲಿತಾಂಶ ಪ್ರಕಟಗೊಂಡ ಕೂಡಲೇ ಜೆಡಿಎಸ್ ಗೆ ಬೆಂಬಲ ನೀಡುವುದಾಗಿ ಘೋಷಿಸಿದ ಕಾಂಗ್ರೆಸ್ ಮರುದಿನ ಬೆಳಗ್ಗೆಯೇ ತನ್ನೆಲ್ಲಾ ಶಾಸಕರನ್ನು ಬಿಡದಿಯ ಹತ್ತಿರದ ರೆಸಾರ್ಟ್ ಗೆ ಕರೆದೊಯ್ದಿತ್ತು. ಬಹುಮತ ಪಡೆದ ಬಿಜೆಪಿ ಸದನದಲ್ಲಿ ವಿಶ್ವಾಸಮತ ಪಡೆಯಲು ಕುದುರೆ ವ್ಯಾಪಾರ ನಡೆಸಿ ತನ್ನ ಶಾಸಕರನ್ನು ಖರೀದಿಸಬಹುದು ಎಂಬ ಭಯದಿಂದ ಜೆಡಿಎಸ್ ಕೂಡ ನಗರದ ಸ್ಟಾರ್ ಹೊಟೇಲೊಂದರಲ್ಲಿ ತನ್ನ ಶಾಸಕರನ್ನು ಕೂಡಿ ಹಾಕಿತ್ತು.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹೈದರಾಬಾದಿನ ಹೊಟೇಲ್ ಗೆ ಕರೆದೊಯ್ಯಲಾಯಿತು. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೇಲೆ ಕೂಡ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಅಧಿಕಾರಕ್ಕೆ ಬಂದ ನಂತರವೂ ಕೊನೆಯ ಕ್ಷಣದಲ್ಲಿ ಶಾಸಕರು ಬಿಜೆಪಿಯತ್ತ ಹೋಗಬಾರದು ಎಂದು ಹೊಟೇಲ್ ಮತ್ತು ರೆಸಾರ್ಟ್ ನಲ್ಲಿಯೇ ಶಾಸಕರನ್ನು ಎರಡೂ ಪಕ್ಷಗಳು ಉಳಿಸಿಕೊಂಡಿದ್ದವು. ಇಂದು ಬೆಳಗ್ಗೆ ನಗರ ಹೊರವಲಯದ ಹೊಟೇಲ್ ಮತ್ತು ರೆಸಾರ್ಟ್ ನಲ್ಲಿ ತಂಗಿರುವ ಶಾಸಕರನ್ನು ಕರೆತರುವ ಕೆಲಸ ಮಾಡಲಾಗುತ್ತಿದೆ. ಇಂದು ವಿಶ್ವಾಸಮತ ಮುಗಿದ ನಂತರ ತಮ್ಮನ್ನು ತಮ್ಮ ಕ್ಷೇತ್ರಗಳಿಗೆ ತೆರಳಲು ಪಕ್ಷದ ಮುಖಂಡರು ಬಿಟ್ಟರೆ ಸಾಕಪ್ಪಾ ಎನ್ನುವ ಮನಸ್ಥಿತಿಯಲ್ಲಿ ಶಾಸಕರಿದ್ದಾರೆ.

ಪಕ್ಷದ ಕಾರ್ಯಕರ್ತರು ತಮ್ಮ ಶಾಸಕರ ಗೆಲುವಿನ ಸಂಭ್ರಮಾಚರಣೆಯನ್ನು ಮಾಡಲು ಕ್ಷೇತ್ರಗಳಿಗೆ ಬರುವುದನ್ನು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಏನು ಬೆಳವಣಿಗೆಗಳಾಗುತ್ತಿವೆ ಎಂದು ತಿಳಿದುಕೊಳ್ಳಲು ಜನರು ಪ್ರತಿದಿನ ಕರೆ ಮಾಡುತ್ತಿದ್ದಾರೆ ಎನ್ನುತ್ತಾರೆ ಸಿಂಧನೂರಿನ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡರ ಸೋದರ ಬಸವರಾಜ್ ನಾಡಗೌಡ.

ವೆಂಕಟರಾವ್ ಅವರ ಸೋದರ ಮತ್ತು ಪತ್ನಿ ಕೂಡ ಅವರ ಜೊತೆಗಿದ್ದಾರೆ. ಕಾರ್ಯಕರ್ತರಿಗೆ ಶಾಸಕರಿಲ್ಲದೆ ಬೇಸರವಾಗುತ್ತಿದೆ, ಅವರಿಗೆ ಕೂಡ ಎನ್ನುತ್ತಾರೆ ಬಸವರಾಜ್. ಅವರು ಹಿಂತಿರುಗಿದ ನಂತರ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆಯಿರುವುದರಿಂದ ನಮಗೆ ಭಾರೀ ಸಂಭ್ರಮ ಎಂದು ಹೇಳಿದರು.

ಕಾಂಗ್ರೆಸ್ ನ ಪ್ರತಾಪ್ ಗೌಡ ಪಾಟೀಲ ಕೂಡ ಬೆಂಗಳೂರಿನ ರೆಸಾರ್ಟ್ ನಲ್ಲಿದ್ದಾರೆ. ಅವರ ಜೊತೆ ಸ್ನೇಹಿತ ಬಸವಂತ ರಾಯಪ್ಪ ಇದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಇರದೇ ಇರುವುದು ಪಾಟೀಲ್ ಗೆ ಬೇಸರ ತಂದಿದೆ. ವಿಶ್ವಾಸಮತ ಮುಗಿದ ಕೂಡಲೇ ಮಸ್ಕಿಗೆ ಬರುತ್ತಾರೆ. ಬಿಜೆಪಿಗೆ ಸೇರುವ ಬಗ್ಗೆ ಅವರಲ್ಲಿ ಗೊಂದಲಗಳಿದ್ದವು. ಮಸ್ಕಿಗೆ ಬಂದ ಕೂಡಲೇ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸುತ್ತಾರೆ ಎಂದರು ಬಸವಂತ ರಾಯಪ್ಪ.

ಪ್ರತಿದಿನ ಕಾರ್ಯಕರ್ತರು ಮನೆಗೆ ಬಂದು ಶಾಸಕರು ಯಾವಾಗ ಹಿಂತಿರುಗುತ್ತಾರೆ ಎಂದು ಕೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಬೆಂಗಳೂರಿನಲ್ಲಿ ಇರಬೇಕಾಗುತ್ತದೆ. ವಿಶ್ವಾಸಮತ ಮುಗಿದ ನಂತರ ಹಿಂತಿರುತ್ತಾರೆ. ಪ್ರತಿದಿನ ಫೋನ್ ಮಾಡಿ ನಮ್ಮ ಜೊತೆ ಅವರು ಮಾತನಾಡುತ್ತಾರೆ ಎನ್ನುತ್ತಾರೆ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಪತ್ನಿ ಶಶಿಕಲಾ.

ಸುಮಾರು 100 ಮಂದಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಕಳೆದ 10 ದಿನಗಳಿಂದ ರೆಸಾರ್ಟ್ ಮತ್ತು ಸ್ಟಾರ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದು ಹಲವು ಕೋಟಿಗಳವರೆಗೆ ಹೊಟೇಲ್ ಬಿಲ್ ಬರುವ ಸಾಧ್ಯತೆಯಿದೆ. ಎಲ್ಲಾ ಶಾಸಕರು ಹೊಟೇಲ್ ಮತ್ತು ರೆಸಾರ್ಟ್ ಗಳಿಲ್ಲ ಉಳಿದುಕೊಂಡಿಲ್ಲ. ಕೆಲವರು ತಮ್ಮ ಕುಟುಂಬಸ್ಥರು ಮತ್ತು ಸಹಚರರೊಂದಿಗೆ ಉಳಿದುಕೊಂಡಿದ್ದರು.ಯಾರು ಹೊಟೇಲ್ ಬಿಲ್ ಪಾವತಿಸುತ್ತಾರೆ ಎಂಬುದು ಗೊತ್ತಿಲ್ಲ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com