
ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದರು.
ನಂತರ ಸದನವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಸೇವಾ ಹಿರಿತನದ ಆಧಾರದ ಮೇಲೆ 2ನೇ ಬಾರಿಗೆ ರಮೇಶ್ ಕುಮಾರ್ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಅನುಭವ ಈ ಸದನದ 221 ಸದಸ್ಯರಿಗೆ ದೊರಕುವಂತಾಗಲಿ ಎಂದು ಆಶಿಸಿದರು.
ಸ್ಪೀಕರ್ ಆಗಿ ರಮೇಶ್ ಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿರುವುದು ಸಂತಸ ತಂದಿದೆ. ವೈಕುಂಠ ಬಾಳಿಗ ಮತ್ತು ಕೆ.ಎಸ್.ನಾಗರತ್ಮಮ್ಮನಂತವರು ಈ ಸದನದ ಸಭಾಧ್ಯಕ್ಷರಾಗಿ ಅವಿಸ್ಮರಣೀಯ ಸೇವೆ ನೀಡಿದ್ದಾರೆ. ಅಂತೆಯೇ ಈ ಬಾರಿ ಕೂಡ ಸಭಾಧ್ಯಕ್ಷರ ಮಾರ್ಗದರ್ಶನದಲ್ಲಿ ಈ ನಾಡಿಗೆ ಉತ್ತಮ ಆಡಳಿತ ನೀಡುವಂತಾಗಲಿ ಎಂದು ಆಶಿಸುತ್ತೇನೆ ಎಂದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ನೇರ ನುಡಿ, ಮೇಧಾವಿತನ, ಸಮಾಜದ ಬಡವರ ಬಗ್ಗೆ ಇರುವ ಬದ್ಧತೆ ರಮೇಶ್ ಕುಮಾರ್ ಅವರನ್ನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದೆ. 2 ನೇ ಬಾರಿಗೆ ಸಭಾಧ್ಯಕ್ಷರಾಗಿ ಸ್ಥಾನ ತುಂಬಿರುವ ರಮೇಶ್ ಕುಮಾರ್ ಅವರು ಇಡೀ ಸದನವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವಿರಾಗಿ ನಂಬುತ್ತೇನೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಕಾನೂನು ಜ್ಞಾನ ಹೊಂದಿರುವ, 40 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯ ಅನುಭವ ಹೊಂದಿರುವ ರಮೇಶ್ ಕುಮಾರ್ ಅವರು ವಿಧಾನಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದು ಸಂತಸದ ವಿಷಯ ಎಂದರು.
ಇತ್ತೀಚೆಗೆ ಸದನದಲ್ಲಿ ಗಂಭೀರ, ಚಿಂತನಾರ್ಹ ಚರ್ಚೆಗಳು ನಡೆಯುವುದಿಲ್ಲ, ಸದನ ಸದಸ್ಯರು ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂಬ ಆರೋಪಗಳಿವೆ. ಇನ್ನು ಮುಂದೆ ರಮೇಶ್ ಕುಮಾರ್ ಅವರ ಮುಂದಾಳತ್ವದಲ್ಲಿ ಗತವೈಭವ ಕಲಾಪದಲ್ಲಿ ಮತ್ತು ಸದನದಲ್ಲಿ ಮರುಕಳಿಸಲಿ ಎಂದು ಸಿದ್ದರಾಮಯ್ಯ ಆಶಿಸಿದರು.
Advertisement