1985 ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಬಳಿ ಚಿಕ್ಕಪಡಸಲಗಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಕೋರಿದರು. ಆದರೆ ಅನುದಾನ ನೀಡುವ ಮೊದಲು 5 ಲಕ್ಷ ರು ಸಂಗ್ರಹ ಮಾಡುವಂತೆ ಹೆಗಡೆ ಸೂಚಿಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಸಿದ್ದು, ಕೃಷ್ಣಾ ತೀರದರೈತ ಸಂಘ ಹೆಸರಿನಲ್ಲಿ ಕೃಷ್ಣಾ ಬ್ಯಾಂಕ್ ರೈತರ ಸಂಘ ಸ್ಥಾಪಿಸಿ ಪ್ರತಿಯೊಬ್ಬ ರೈತರಿಂದ 500 ರು ಹಣ ಸಂಗ್ರಹಿಸಿದರು. ಸುಮಾರು 30 ಹಳ್ಳಿಗಳ ಜನರು, ತಮ್ಮ ಹಣ ಹಾಗೂ ಭೂಮಿಯನ್ನು ನೀಡಿದರು, ಕೆಲವರು ತಮ್ಮ ಬಳಿಯಲ್ಲಿದ್ದದ್ದನ್ನು ಮಾರಿ ಜಲಾಶಯ ನಿರ್ಮಾಣ ಮಾಡಲು ಧನ ಸಹಾಯ ಮಾಡಿದರು. ಒಂದು ವಾರದೊಳಗೆ ತಮ್ಮ ಟಾರ್ಗೆಟ್ ಮುಟ್ಟಿದರು., ನಂತರ ಸಿಎಂ ಅವರನ್ನು ಭೇಟಿ ಮಾಡಿ ತಾವು ಹಣ ಸಂಗ್ರಹಿಸಿರುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡಿದರು. ಅದಾದ ನಂತರ ಬೆಳಗಾವಿ ಜಿಲ್ಲಾ ಪರಿಷದ್ ಅಧ್ಯಕ್ಷ ಅಮರಸಿಂಹ ಪಾಟೀಲ್ ಸಣ್ಣ ಬ್ಯಾರೇಜ್ ನಿರ್ಮಾಣಕ್ಕಾಗಿ 5 ಲಕ್ಷ ರು ಹಣ ಬಿಡುಗಡೆ ಮಾಡಿದರು. ಕಪಾರ್ಟ್ ಯೋಜನೆಯಡಿ ಕೇಂದ್ರ ಸರ್ಕಾರ 28 ಲಕ್ಷ ರು ಹಣ ಬಿಡುಗಡೆ ಮಾಡಿತು.