ಚಂದ್ರಶೇಖರ್ ನಡೆಯಿಂದ ಬಿಜೆಪಿಗೆ ಮುಖಭಂಗ; ಪತ್ನಿ ಪರ ಪ್ರಚಾರ ಕೈಬಿಟ್ಟ ಸಿಎಂ; ಕಮಲ ಬಿಟ್ಟು ತೆನೆ ಹೊತ್ತ 'ಲೀಲಾವತಿ'!

ನಾಳೆ ಅಂದರೆ ಶನಿವಾರ ರಾಮನಗರದ ಸುಮಾರು 2 ಲಕ್ಷ ಮತದಾರರು ತಮ್ಮ ವಿಧಾನಸಭೆ ಕ್ಷೇತ್ರದ ಮುಂದಿನ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ,...
ಎಲ್ ಚಂದ್ರಶೇಖರ್ ಮತ್ತು ಅನಿತಾ ಕುಮಾರಸ್ವಾಮಿ
ಎಲ್ ಚಂದ್ರಶೇಖರ್ ಮತ್ತು ಅನಿತಾ ಕುಮಾರಸ್ವಾಮಿ
ರಾಮನಗರ: ನಾಳೆ ಅಂದರೆ ಶನಿವಾರ ರಾಮನಗರದ ಸುಮಾರು 2 ಲಕ್ಷ ಮತದಾರರು ತಮ್ಮ ವಿಧಾನಸಭೆ ಕ್ಷೇತ್ರದ ಮುಂದಿನ ಪ್ರತಿನಿಧಿಯನ್ನು ಆಯ್ಕೆ ಮಾಡಲಿದ್ದಾರೆ, ಒಕ್ಕಲಿಗ ಭದ್ರಕೋಟೆಯಲ್ಲಿ ಗೆಲುವು ಸಾಧಿಸಲು ಹಂಬಲಿಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ತಮ್ಮ ಪಕ್ಷದ ಅಭ್ಯರ್ಥಿ ಕೈಗೊಂಡ ನಿಲುವಿನಿಂದ ಆಘಾತವಾಗಿದೆ. ಜೊತೆಗೆ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಚುನಾವಣೆಗೆ ಇನ್ನೂ ಕೆಲವೇ ಗಂಟೆಗಳು ಬಾಕಿಯಿರುವಾಗ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರ ಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ, 
ಗುರುವಾರ ಎಲ್ಲಾ ಪಕ್ಷಗಳ ರಾಜಕೀಯ ಚಟುವಟಿಕೆಗೆ ತೆರೆ ಬಿದ್ದಿದೆ. ಆಕ್ರೋಶ ಗೊಂಡ ಬಿಜೆಪಿ ಕಾರ್ಯಕರ್ತರು ಚಂದ್ರಶೇಖರ್ ವಿರುದ್ಧ ಅಣುಕು ಶವಯಾತ್ರೆ ನಡೆಸಿದರು. ಈ ಎಲ್ಲೆ ಬೆಳವಣಿಗಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ತಮ್ಮ ಪತ್ನಿ ಪರ ಹಮ್ಮಿಕೊಂಡಿದ್ದ ರ್ಯಾಲಿಯನ್ನು ರದ್ದುಗೊಳಿಸಿದರು. 
ಸ್ಥಳೀಯ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ನಾವು ಸಂತಸದಿಂದ ಇದ್ದೆವು. ಅನಿತಾ ಕುಮಾರ ಸ್ವಾಮಿ ಅವರನ್ನು ಚುನಾಯಿಸುವುದು ಆಯ್ಕೆಯಲ್ಲ, ಏಕೆಂದರೇ ಅವರು ಯಾವುದೇ ಕಾರಣಕ್ಕೂ ಕ್ಷೇತ್ರದಲ್ಲಿ ಇರುವುದಿಲ್ಲ,  ಎಂದು ರಾಮನಗರ ಬಿಜೆಪಿ ಪದಾಧಿಕಾರಿ ರಾಜುಕುಮಾರ್ ಗೌಡ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ಇಲ್ಲಿ ಉತ್ತಮ ಬೆಂಬಲ ದೊರಕುತ್ತಿತ್ತು, ಆದರೆ ಅವರು ಚುನಾವಣೆಯನ್ನು ಧಿಕ್ಕರಿಸಿದ್ದಾರೆ ಎಂದು ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಹೇಳಿದ್ದಾರೆ.
ರಾಮನಗರದಲ್ಲಿ ಬಿಜೆಪಿಗೆ ಮತ್ತೊಂದು ಹಿನ್ನೆಡೆಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೀಲಾವತಿ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. 
ಇನ್ನೂ ಚಂದ್ರಶೇಖರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್, ಚಂದ್ರಶೇಖರ್ ಅವರಿಗೆ ಡಿ,ಕೆ ಶಿವಕುಮಾರ್ ಬೆದರಿಕೆ ಹಾಕಿರಬಹುದು. ಬುಧವಾರ ಮಧ್ಯಾಹ್ನ 2.30 ರವರೆಗೆ ಚಂದ್ರಶೇಖರ್ ಪ್ರಚಾರದಲ್ಲಿ ಭಾಗವಹಿಸಿದ್ದರು. ಅದಾದ ನಂತರ ಹಣಕಾಸಿನ ವ್ಯವಸ್ಥೆ ಮಾಡಲು ಬೆಂಗಳೂರಿಗೆ ತೆರಳುತ್ತಿರುವುದಾಗಿ ಹೇಳಿದರು, ನಂತರ ರಾತ್ರಿ 10.30ಕ್ಕೆ ಕರೆ ಮಾಡಿ ಬೆಳಗ್ಗೆ ಬರುವುದಾಗಿ ಹೇಳಿದ್ದರು ಎಂದು ರುದ್ರೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com