ಸಿದ್ದರಾಮಯ್ಯ
ಸಿದ್ದರಾಮಯ್ಯ

ಟಿಪ್ಪು ಜಯಂತಿ ಆಯ್ತು, ಸಿದ್ದರಾಮಯ್ಯ ಮಾಡಿರುವ ಟ್ವೀಟ್ ನ ರಹಸ್ಯವೇನು?

ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಈ ಬಾರಿ ರಾಜ್ಯ ...

ಬೆಂಗಳೂರು: 2015ರಲ್ಲಿ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ರಾಜ್ಯ ಸರ್ಕಾರದಿಂದ ನೀರಸವಾಗಿ ಟಿಪ್ಪು ಜಯಂತಿ ಕಾರ್ಯಕ್ರಮ ಮುಗಿದ ನಂತರ ಟ್ವೀಟ್ ಮಾಡಿದ್ದಾರೆ. ಅದರ ಒಳಾರ್ಥದ ಬಗ್ಗೆ ಇದೀಗ ರಾಜಕೀಯ ಚರ್ಚೆ ನಡೆಯುತ್ತಿದೆ. ಅದು ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಗೈರಾದ ನಾಯಕರನ್ನು ಮೂದಲಿಸಿರಬಹುದೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅವರ ಟ್ವೀಟ್ ನ ಕನ್ನಡ ಸಾರಾಂಶ ಹೀಗಿದೆ: ಸಾರ್ವಜನಿಕ ಉಪಯೋಗಕ್ಕೆ ಕೆಲವೊಮ್ಮೆ ಹೊಂದಾಣಿಕೆ ಮುಖ್ಯವಾಗುತ್ತದೆ. ನಾನು ಕೂಡ ಇದನ್ನೇ ಮಾಡಿರಬಹುದು. ಆದರೆ ಜಾತ್ಯತೀತತೆಯ ಮೂಲತತ್ವಗಳ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಈ ಟ್ವೀಟ್ ಹಲವರ ಹುಬ್ಬೇರಿಸಿರುವುದಂತೂ ಖಂಡಿತ. ಅಂದು ಕುಮಾರಸ್ವಾಮಿಯವರು ವಿರೋಧ ಪಕ್ಷದಲ್ಲಿದ್ದಾಗ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಬೆಂಬಲಿಸಿರಲಿಲ್ಲ. ಆದರೆ ಇಂದು ಮೈತ್ರಿಪಕ್ಷದಲ್ಲಿ ಕಾಂಗ್ರೆಸ್ ಇರುವಾಗ ಬಹಿರಂಗವಾಗಿ ವಿರೋಧಿಸಲು ಆಗುವುದಿಲ್ಲ. ಆರೋಗ್ಯದ ನೆಪವೊಡ್ಡಿ ಕಾರ್ಯಕ್ರಮದಿಂದ ದೂರವುಳಿದಿದ್ದರು.

ಕೇವಲ ಸಿಎಂ ಕುಮಾರಸ್ವಾಮಿಯವರು ಮಾತ್ರವಲ್ಲದೆ, ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದು ಸಿದ್ದರಾಮಯ್ಯನವರಿಗೆ ಮತ್ತಷ್ಟು ಬೇಸರ, ಮುಜುಗರವನ್ನುಂಟುಮಾಡಿದೆ ಎನ್ನಬಹುದು. ಶನಿವಾರ ಸಾಯಂಕಾಲವಷ್ಟೇ ಪರಮೇಶ್ವರ್ ಅವರು ವಿದೇಶದಿಂದ ವಾಪಸ್ಸಾದ್ದರಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅವರ ಕಚೇರಿ ಮೂಲಗಳು ತಿಳಿಸಿದವು.

ಜೆಡಿಎಸ್ ಅವಕಾಶವಾದಿ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ. ಸಮ್ಮಿಶ್ರ ಸರ್ಕಾರ ನಡೆಸುವುದು ಕಾಂಗ್ರೆಸ್ ಗೆ ಅನಿವಾರ್ಯ ಎಂಬುದು ಜೆಡಿಎಸ್ ಗೆ ಗೊತ್ತಿದೆ, ಹೀಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ. ಆಚರಣೆಯ ದಿನಾಂಕವನ್ನು ಬದಲಿಸಲಾಯಿತು ಮತ್ತು ಆಹ್ವಾನಿತರು ಯಾರ್ಯಾರು ಬರುತ್ತಾರೆಂದು ಶುಕ್ರವಾರ ಸಂಜೆಯವರೆಗೆ ಹೇಳಿರಲಿಲ್ಲ ಎನ್ನುತ್ತಾರೆ.

ಟಿಪ್ಪು ಜಯಂತಿಯನ್ನು ಜಾರಿಗೆ ತಂದ ಸಿದ್ದರಾಮಯ್ಯನವರಿಗೆ ಪ್ರಮುಖ ನಾಯಕರು ಕಾರ್ಯಕ್ರಮಕ್ಕೆ ಬಾರದಿದ್ದಾಗ ಸ್ವಾಭಾವಿಕವಾಗಿ ಬೇಸರವಾಗುತ್ತದೆ. ಶನಿವಾರ ನಡೆದ ಬೆಳವಣಿಗೆ ಸರ್ಕಾರದ ಜಾತ್ಯತೀತ ಹಿತಾಸಕ್ತಿ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡುತ್ತದೆ ಎನ್ನುತ್ತಾರೆ ಸಿದ್ದರಾಮಯ್ಯನವರ ಆಪ್ತರೊಬ್ಬರು.

ಸಿದ್ದರಾಮಯ್ಯನವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಕಾರ್ಯಕ್ರಮ ವಿಧಾನಸೌಧದ ಕಾರ್ಯಕ್ರಮಕ್ಕಿಂತ ಸುಂದರವಾಗಿತ್ತು ಶನಿವಾರದ ಬೆಳವಣಿಗೆ ಖಂಡಿತವಾಗಿಯೂ ಸಿದ್ದರಾಮಯ್ಯನವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ನ ಹಿರಿಯ ಶಾಸಕರೊಬ್ಬರು ಹೇಳುತ್ತಾರೆ.

Related Stories

No stories found.

Advertisement

X
Kannada Prabha
www.kannadaprabha.com