ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರ ಬಂದು ಆರು ತಿಂಗಳಾಗಿದೆ, ಆದರೆ ಸರ್ಕಾರವೇ ಅಸ್ತಿತ್ವದಲ್ಲಿಲ್ಲ, ಅದು ಸತ್ತು ಹೋಗಿದೆ. ಹೀಗಾದರೆ ವಿಷ್ ಮಾಡೋದಾದರೂ ಹೇಗೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್ "ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವುದೊಂದು, ಮಾಡುವುದೊಂದು.ಸರ್ಕಾರ ದಿವಾಳಿಯಾಗಿದೆ.ಇಂತಹಾ ಸನ್ನಿವೇಶದಲ್ಲಿ ಸರ್ಕಾರಕ್ಕೆ ವಿಷ್ ಮಾಡೋದಾದರೂ ಹೇಗೆ" ಎಂದಿದ್ದಾರೆ.
ಸರ್ಕಾರ ನಮ್ಮ ಫೋನ್ ಗಳನ್ನು ಟ್ರಾಪ್ ಮಾಡುತ್ತಿದೆ ಎನ್ನುವ ಕುರಿತಂತೆ ನನಗೆ ತಾಂತ್ರಿಕ ಜ್ಞಾನ ಇಲ್ಲ. ಆದರೆ ಒಮ್ಮೊಮ್ಮೆ ನಮ್ಮ ಫೋನ್ ಗಳಲ್ಲಿವಿಚಿತ್ರ ನಮೂನೆಯ ಸದ್ದು ಕೇಳಿಸುತ್ತದೆ.ಇನ್ನು ಸರ್ಕಾರಕ್ಕೆ ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುವ ಬುದ್ದಿ ಇಲ್ಲ. ಪ್ರತಿಪಕ್ಷದವರಾದ ನಾವು ಸರ್ಕಾರದ ತಪ್ಪುಗಳನ್ನು ಎತ್ತಿ =ತೋರಿಸಿದಾಗ ಅದನ್ನು ವಿರೋಧಿಸುವ ಮನೋಭಾವವಿದೆ. ಟೀಕೆ ಮಾಡಲೇಬಾರದು ಎಂದರೆ ಹೇಗೆ>? ಶೆಟ್ಟರ್ ಪ್ರಶ್ನಿಸಿದ್ದಾರೆ.
ಈ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಇದರಲ್ಲೊಬ್ಬ ಸಕ್ಕರೆ ಸಚಿವರಿದ್ದಾರೆ ಎನ್ನುವುದು ತಿಳಿದೇ ಇರಲಿಲ್ಲ. ಹಾಗೊಂದು ವೇಳೆ ಕಬ್ಬು ಬೆಳೆಗಾಗ್ರರ ಸಮಸ್ಯೆ ಬಗೆಹರಿದದ್ದಾದರೆ ಅವರೇಕೆ ಬೀದಿಗಿಳಿದು ಹೋರಾಡುತ್ತಾರೆ? ಸರ್ಕಾರ ಎರಡು ತಿಂಗಳ ಹಿಂದೆಯೇ ಸಕ್ಕರೆ ಕಾರ್ಖಾನೆ ಮಾಲೀಕರನ್ನು ಮಾತನಾಡಿಅಬೇಕಾಗಿತ್ತು ಎಂದು ಶೆಟ್ಟರ್ ಸರ್ಕಾರದ ಕಾರ್ಯವೈಖರಿ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ರೈತರಿಗೆ ಇನ್ನೂ ಋಣಮುಕ್ತ ಪತ್ರ ಸಿಕ್ಕಿಲ್ಲ ಎಂದು ಹೇಳಿದ ಶೆಟ್ಟರ್ ಸರ್ಕಾರ ಸಾಲಮನ್ನಾ ತಪ್ಪಿಸಲು ಸಬೂಬು ಹೇಳಿ ಜಾರಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ