ಬೆಂಗಳೂರು: ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ವಿಫಲವಾದ ನಂತರ, ಆಡಳಿತರೂಢ ಬಿಜೆಪಿಯನ್ನು ಸೋಲಿಸಲು ಸಮಾನ ಮನಸ್ಕ ಪಕ್ಷಗಳು ಒಂದಾಗುವ ಅಗತ್ಯ ಇದೆ ಎಂದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಭಾನುವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಎಎನ್ಐ ಜೊತೆ ಮಾತನಾಡಿದ ಖರ್ಗೆ, ಪ್ರತಿ ರಾಜ್ಯವೂ ತನ್ನದೆಯಾದ ರಾಜಕೀಯ ಶಕ್ತಿ ಮತ್ತು ತಂತ್ರಗಾರಿಕೆಯನ್ನು ಹೊಂದಿವೆ. ಇದನ್ನು ಅರಿತುಕೊಂಡು ಸಮಾನ ಮನಸ್ಕ ಪಕ್ಷಗಳೆಲ್ಲವೂ ಸರ್ಕಾರದ ವಿರುದ್ಧ ಒಂದಾಗಬೇಕು ಎಂದಿದ್ದಾರೆ.
ನಿನ್ನೆಯಷ್ಟೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು, ನಾವು ಕಾಂಗ್ರೆಸ್ ಗಾಗಿ ಕಾಯುವುದಿಲ್ಲ. ನಾವು ಬಿಎಸ್ಪಿ ಜತೆ ಮೈತ್ರಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದರು.
ಇತ್ತೀಚಿಗೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಸಹ ಮಧ್ಯ ಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು.