ಕಾಂಗ್ರೆಸ್ ಕಾರ್ಯಕರ್ತರಿಗೆ ಮಲತಾಯಿ ಧೋರಣೆ: ಅಧಿಕಾರ ಹಂಚಿಕೆ ಕುರಿತಂತೆ ಸಿಎಂ ಗೆ ಪತ್ರ!

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ಸರಿಪಡಿಸಲು ಕಾಂಗ್ರೆಸ್ ಮುಂದಾಗಿದೆ. ಸರ್ಕಾರದಲ್ಲಿ ಕಾಂಗ್ರೆಸ್‌  ಸಚಿವರು, ಮುಖಂಡರು ಕಾರ್ಯಕರ್ತರಿಗೆ ಮಾನ್ಯತೆ ದೊರೆಯುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ಸಂಪುಟ ರಚನೆ, ನಿಗಮ ಮಂಡಳಿ ನೇಮಕ, ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡುವಾಗ 2:1 ರ ಅನುಪಾತದಲ್ಲಿ ನೇಮಕ ಮಾಡಬೇಕೆಂಬ ಒಪ್ಪಂದದಂತೆ ಅಕ್ರಮ-ಸಕ್ರಮ, ಭೂ ನ್ಯಾಯಮಂಡಳಿ ಸೇರಿದಂತೆ ಎಲ್ಲ ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ಹೊಸದಾಗಿ ರಚಿಸಬೇಕಿದೆ. ಈ ಸಮಿತಿ ರಚಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌  ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುವಂತೆ ನೋಡಿಕೊಳ್ಳಬೇಕೆಂದು ದಿನೇಶ್‌ ಗುಂಡೂರಾವ್‌ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. 
ಕಾಂಗ್ರೆಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರಿಗೆ 2:1 ರ ಅನುಪಾತ, ಜೆಡಿಎಸ್‌ ಶಾಸಕರು ಇರುವ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರಿಗೆ 2:1 ರ ಅನುಪಾತದಲ್ಲಿ ಸದಸ್ಯರನ್ನು ನೇಮಿಸುವುದು. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಎರಡನೇ ಸ್ಥಾನದಲ್ಲಿದ್ದರೆ ಕಾಂಗ್ರೆಸ್‌ಗೆ 2 ಜೆಡಿಎಸ್‌ ಗೆ 1 ರ ಅನುಪಾತ. ಜೆಡಿಎಸ್‌ ಎರಡನೇ ಸ್ಥಾನದಲ್ಲಿದ್ದರೆ ಜೆಡಿಎಸ್‌ಗೆ 2 ಕಾಂಗ್ರೆಸ್‌ಗೆ 1 ರ ಅನುಪಾತದಲ್ಲಿ ಸದಸ್ಯರುಗಳನ್ನು ನೇಮಕ ಮಾಡಬೇಕುಎಂದು ವಿವರಿಸಿದ್ದಾರೆ. 
ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದ ಸಮಿತಿಗಳ ರಚನೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರಿಗೆ ಹೆಚ್ಚಿನ ಅವಕಾಶ ದೊರೆಯುವಂತೆ ನೋಡಿಕೊಳ್ಳಲು ಸರ್ಕಾರದ ಎಲ್ಲ ಸಚಿವರುಗಳಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com