ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧವೂ #MeToo ಆರೋಪ ಕೇಳಿಬರಬಹುದು: ಕುಮಾರ ಬಂಗಾರಪ್ಪ

ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರಿಗಾದ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುವ ...
ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಕುಮಾರ ಬಂಗಾರಪ್ಪ, ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
Updated on

ಶಿವಮೊಗ್ಗ: ಸಾಮಾಜಿಕ ಮಾಧ್ಯಮಗಳಲ್ಲಿ ಮಹಿಳೆಯರಿಗಾದ ಲೈಂಗಿಕ ಕಿರುಕುಳದ ಅನುಭವಗಳನ್ನು ಹಂಚಿಕೊಳ್ಳುವ ಮಿಟೂ ಚಳವಳಿ ಇದೀಗ ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಕೇಳಿಬಂದಿದೆ.

ಇಂದು ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಸೊರಬ ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ, ಸಿಎಂ ಹೆಚ್ ಡಿ ಕುಮಾರಸ್ವಾಮಿಯವರನ್ನು ವೈಯಕ್ತಿಕವಾಗಿ ಟೀಕಿಸಿದ್ದಾರೆ. ವಿರೋಧ ಪಕ್ಷದವರು ಹಾಗೆ, ಹೀಗೆ ಎಂದು ಹೋದಬಂದಲ್ಲೆಲ್ಲಾ ಮುಖ್ಯಮಂತ್ರಿಗಳು ಸುಳ್ಳಿನ ಕಂತೆ ಹೆಣೆಯುತ್ತಾರೆ. ಅವರ ಮೇಲೆ ಕೂಡ ಮುಂದಿನ ದಿನಗಳಲ್ಲಿ ಗಂಭೀರ ಆರೋಪ ಕೇಳಿಬರಬಹುದು. ಇಂದು ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ಮಿಟೂ ಎಂಬ ಚಳವಳಿಯಡಿ ಶೋಷಣೆಗೊಳಗಾದವರು ಸಿಎಂ ವಿರುದ್ಧ ಆರೋಪ ಮಾಡಬಹುದು, ಎಚ್ಚರವಿರಿ ಕುಮಾರಸ್ವಾಮಿಯವರೇ ಎಂದು ಹೇಳಿದ್ದಾರೆ.

ಅದೇಗೆ ಹೇಳಿ ಎಂದು ಅಲ್ಲಿದ್ದ ಸುದ್ದಿಗಾರರು ಕುಮಾರ್ ಬಂಗಾರಪ್ಪನವರನ್ನು ಕೆಣಕಿ ಪ್ರಶ್ನಿಸಿದಾಗ, ಹಾಸನ ಜಿಲ್ಲೆಯಲ್ಲಿ ಯಾಕೆ ಅವರನ್ನು ಚುನಾವಣಾ ಅಖಾಡಕ್ಕೆ ನಿಲ್ಲಿಸುತ್ತಿಲ್ಲ. ಯಾರನ್ನ ಸರ್ ಎಂದಾಗ..ಯಾರನ್ನು ಇಟ್ಟುಕೊಂಡಿದ್ದಾರೋ ಅವರನ್ನು..ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಕುಮಾರಸ್ವಾಮಿ ಅಂತ ಹಾಕಿಕೊಂಡಿದ್ದಾರಲ್ಲ ಅವರನ್ನು ಎಂದು ಹೇಳಿದರು.

ರಾಧಿಕಾ ಕುಮಾರಸ್ವಾಮಿಯವರು ತಾವು ಕುಮಾರಸ್ವಾಮಿ ಪತ್ನಿ ಎಂದು ಹೇಳಿಕೊಂಡಿದ್ದಾರೆ. ಅವರ ಮಗಳ ಜೊತೆ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಿದ, ಒಟ್ಟಿಗೆ ಇರುವ ಫೋಟೋಗಳು ಕಾಣಿಸಿಕೊಂಡಿವೆ. ಸಿಎಂ ಕುಮಾರಸ್ವಾಮಿಯವರು ಏಕೆ ಸಾಮಾಜಿಕವಾಗಿ ಎಲ್ಲರ ಮುಂದೆ ಅವರನ್ನು ಕರೆದುಕೊಂಡು ಬರುತ್ತಿಲ್ಲ, ಏಕೆ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆದುಕೊಂಡು ಹೋಗುವುದಿಲ್ಲ. ಅವರ ಕುಟುಂಬ ಸದಸ್ಯರನ್ನು ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಮಾಡ್ತಾರೆ, ರಾಮನಗರದಲ್ಲಿ ಪಕ್ಷದಿಂದ ಟಿಕೆಟ್ ನೀಡಿ ಚುನಾವಣೆಗೆ ನಿಲ್ಲಿಸುತ್ತಾರೆ, ಹಾಗಾದರೆ ಇವರನ್ನೇಕೆ ಎಲ್ಲರ ಮುಂದೆ ಕುಟುಂಬ ಸದಸ್ಯರೆಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಕೇಳಿದರು.

ಸೆಕ್ಷನ್ 497 ನಡಿ ವಿವಾಹಿತ ಪುರುಷ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡರೆ ಅದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ಕೊಟ್ಟಿದೆ. ಕಾನೂನಿನಲ್ಲಿಯೇ ಮಾನ್ಯತೆ ಸಿಕ್ಕಿರುವಾಗ ನಿಮಗೇಕೆ ಭಯ ಕುಮಾರಸ್ವಾಮಿಯವರೇ ಎಂದು ಕುಮಾರ ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಕೇವಲ ಚುನಾವಣೆಗಾಗಿ ನಮ್ಮ ಕುಟುಂಬವನ್ನು ಬೀದಿಗೆ ತರುತ್ತಿದ್ದೀರಾ? ನನ್ನ ವೈಯಕ್ತಿವಾಗಿ ತೇಜೋವಧೆ ಮಾಡಿದ್ದಕ್ಕೆ, ನಾನೂ ಕೂಡಾ ನಿಮ್ಮ ವೈಯಕ್ತಿಕ ವಿಚಾರ ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂಗಾರಪ್ಪ ಅವರ‌ ಹೆಸರನ್ನು ಕುಮಾರಸ್ವಾಮಿ ಅವರು ಪದೇ ಪದೇ ಬಳಸಿಕೊಳ್ಳುತ್ತಿದ್ದಾರೆ. ನಾನು ಬಂಗಾರಪ್ಪ ಅವರ ದೊಡ್ಡ‌ಮಗನಿದ್ದಂತೆ ಎಂದು ಹೇಳಿದ್ದಾರೆ. ಆದರೆ, ನೀವಿಬ್ಬರು ಸೇರಿ ಇನ್ನೂ ಏಕೆ ಬಂಗಾರಪ್ಪ ಅವರ ಸಮಾಧಿ ‌ಜಾಗದಲ್ಲಿ ಸ್ಮಾರಕ ನಿರ್ಮಿಸಿಲ್ಲ. ನನಗೆ ಬಿಟ್ಟುಕೊಡಿ 24 ಗಂಟೆಯಲ್ಲಿ ಸ್ಮಾರಕ ನಿರ್ಮಿಸಿ ತೋರಿಸುತ್ತೇನೆ ಎಂದು ಸವಾಲು ಹಾಕಿದರು.

ಕುಮಾರ್ ಬಂಗಾರಪ್ಪ ಉಪ ಚುನಾವಣೆ ಹೊಸ್ತಿಲಿನಲ್ಲಿ ಸಿಡಿಸಿರುವ ಈ ಬಾಂಬ್ ಯಾವ ರೂಪ ಪಡೆದುಕೊಳ್ಳುತ್ತದೆಯೋ ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com