ಲಕ್ಷ್ಮಿ, ಡಿಕೆಶಿ ವಿರುದ್ಧ ರಮೇಶ್ ಕಿಡಿ
ಲಕ್ಷ್ಮಿ, ಡಿಕೆಶಿ ವಿರುದ್ಧ ರಮೇಶ್ ಕಿಡಿ

'ಶೋಪೀಸ್' ಮಾತು ಕೇಳಿದರೆ ಕಾಂಗ್ರೆಸ್ ನಾಶ: ಬೆಳಗಾವಿ ರಾಜಕೀಯದಲ್ಲಿ ಹಸ್ತಕ್ಷೇಪ ಸಲ್ಲ; ಲಕ್ಷ್ಮಿ, ಡಿಕೆಶಿ ವಿರುದ್ಧ ರಮೇಶ್ ಕಿಡಿ

ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ...
ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಬೆಳಗಾವಿಯ ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಜಟಾಪಟಿ ಸದ್ಯಕ್ಕೆ ತಣ್ಣಗಾಗಿದೆ.
ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ದಾಂತಗಳಿಗಾಗಿ ತಮ್ಮ ನಡುವಿನ ವೈರತ್ವಕ್ಕೆ ಅಂತ್ಯ ಹಾಡುತ್ತಿರುವುದಾಗಿ ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್, ಲೋಕಸಭೆ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರು ಸೂಚಿಸುವ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲು ತಾವು ಬಿಡುವುದಿಲ್ಲ ಎಂದು ಹೇಳಿರುವ ಲಕ್ಷ್ಮಿ ಹೆಬ್ಬಾಳ್ಕರ್ ಕೇವಲ ಜಾರಕಿಹೊಳಿ ಅಭ್ಯರ್ಥಿಗೆ ಬೆಂಬಲ ನೀಡುವುದು ಮಾತ್ರವಲ್ಲದೇ ಲೋಕಸಭೆ ಚುನಾವಣೆಯಲ್ಲಿ 53 ಸಾವಿರ ಮತ ಗಳಿಸುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಸಮುದ್ರ ಇದ್ದಂತೆ. ಜಿಲ್ಲಾ ಉಸ್ತುವಾರಿ ಸಚಿವರಿಂದ ಎಲ್ಲ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹೈಕಮಾಂಡ್ ಅವಕಾಶ ನೀಡಿದೆ. ಪಕ್ಷದ ಒಳಿತಿಗಾಗಿ ತಗ್ಗಿ, ಬಗ್ಗಿ ನಡೆಯಲು ನಾನು ಸಿದ್ಧವಾಗಿರುವುದಾಗಿ ಹೇಳಿದ್ದಾರೆ.
ಇನ್ನೂ ಬೆಳಗಾವಿ ರಾಜಕೀಯದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿರುವ  ಶಾಸಕ ರಮೇಶ್ ಜಾರಕಿಹೊಳಿ ಜಿಲ್ಲೆಯಲ್ಲಿ ಪಕ್ಷದ ಪರ ಕಾರ್ಯನಿರ್ವಹಿಸಲು ನಾವು ಸಮರ್ಥವಾಗಿದ್ದೇವೆ ಎಂದು ಕಿಡಿ ಕಾರಿದ್ದಾರೆ.
ಜಿಲ್ಲಾ ರಾಜಕಾರಣದಲ್ಲಿ ಈ ಹಿಂದೆಯೂ ಸುಮಾರು ಬಾರಿ ಪ್ರವೇಶ ಮಾಡಲು ಸಚಿವ ಡಿಕೆ ಶಿವಕುಮಾರ್ ಅವರು ಪ್ರಯತ್ನಿಸಿದ್ದರು. ಆದರೆ ಅಂದು ಪ್ರವೇಶ ಮಾಡಲು ಬಿಡಲಿಲ್ಲ. ಇಂದು ಕೂಡ ಅಷ್ಟೇ. ಅವರು ಯಾರು ನಮಗೆ ಹೇಳಲು, ನಾವು ಪಕ್ಷ ಸಂಘಟನೆ ಮಾಡಲು ಸಮರ್ಥವಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.,
ಮಹಿಳಾ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶೋಪೀಸ್ ಇದ್ದಂತೆ, ಒಂದು ವೇಳೆ  ಆಕೆ ಹೇಳಿದ್ದನ್ನು ಕೇಳಿದರೇ ಕಾಂಗ್ರೆಸ್ ಪಕ್ಷ ನಾಶ ವಾಗುವುದು ಖಚಿತ ಎಂದು ದೂರಿದ್ದಾರೆ. ಈ ಹಿಂದೆ ಲಕ್ಷ್ಮಿ ಹೆಬ್ಬಾಳ್ಕರ್ ಸತೀಶ್ ಕಾಲಿನ ದೂಳಾಗಲು ಲಾಯಕ್ಕಿಲ್ಲ ಎಂದು ರಮೇಶ್ ಟೀಕಿಸಿದ್ದರು. 
ಯಾವುದೇ ನಾಯಕರು ಅನಗತ್ಯವಾಗಿ ರಾಜಕೀಯ ಮಾಡಲು ಇಲ್ಲಿ ಅವಕಾಶವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಶಿಷ್ಟಾಚಾರ ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com