ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆ; ಆತಂಕದಲ್ಲಿ ಕಾಂಗ್ರೆಸ್

ಇಷ್ಟು ದಿನ ಬೆಳಗಾವಿ ರಾಜಕೀಯದಲ್ಲಿ ಬೆಂಕಿಯ ಹೊಗೆಯಾಡುತ್ತಿದ್ದ ಸಕ್ಕರೆ ಕಾರ್ಖಾನೆಯ ಲಾಬಿ ...
Published on

ಬೆಂಗಳೂರು: ಇಷ್ಟು ದಿನ ಬೆಳಗಾವಿ ರಾಜಕೀಯದಲ್ಲಿ ಬೆಂಕಿಯ ಹೊಗೆಯಾಡುತ್ತಿದ್ದ ಸಕ್ಕರೆ ಕಾರ್ಖಾನೆಯ ಲಾಬಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಕಂಠಕವಾಗಿ ಕಾಡಲಾರಂಭಿಸಿದೆ. ಇಬ್ಬರು ಸಕ್ಕರೆ ಕಾರ್ಖಾನೆಗಳ ಪ್ರಭಾವಿ ನಾಯಕರುಗಳು ತಮ್ಮ ಶಕ್ತಿ ಪ್ರದರ್ಶನ ತೋರಿಸಲು ಆರಂಭಿಸಿದ್ದಾರೆ.

ಬೆಳಗಾವಿಯ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ನಿರ್ದೇಶಕರುಗಳ ನೇಮಕಕ್ಕೆ ಮಧ್ಯಾಹ್ನ ಚುನಾವಣೆ ನಡೆಯಲಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಬಿಸಿ ತುಪ್ಪವಾಗಿದ್ದು, ಕಾಂಗ್ರೆಸ್ ನ ಸಚಿವ ರಮೇಶ್ ಜಾರಕಿಹೊಳಿ ಕಠಿಣ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಬ್ಯಾಂಕಿನ ಚುನಾವಣೆ ಜಾರಕಿಹೊಳಿ ಬ್ರದರ್ಸ್ ಪರವಾಗಿ ಬಾರದಿದ್ದರೆ ಮುಂದಿನ ರಾಜ್ಯ ರಾಜಕೀಯದ ಭವಿಷ್ಯ ಏನಾಗಬಹುದು ಎಂಬ ಆತಂಕದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಬೆಳಗಾವಿಯಲ್ಲಿ ಬಿಜೆಪಿ ಪ್ರಭಾವ ತಕ್ಕಮಟ್ಟಿಗೆ ಇದ್ದರೂ ಕೂಡ ಇಲ್ಲಿ ಕಾಂಗ್ರೆಸ್ ನ 8 ಶಾಸಕರಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಈ ಜಿಲ್ಲೆಯನ್ನು ಸುಲಭವಾಗಿ ಬಿಟ್ಟುಕೊಡಲು ಕಾಂಗ್ರೆಸ್ ಸಿದ್ದವಿಲ್ಲ. ಸದ್ಯದ ಮಟ್ಟಿಗೆ ಅಲ್ಲಿ ಇಂದು ಕಾಣುವ ವಾತಾವರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ಸೋದರರು ಸಾರ್ವಜನಿಕವಾಗಿ ತಮ್ಮ ಶಕ್ತಿ ತೋರಿಸುತ್ತಿದ್ದಾರೆ.

ಒಂದು ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು ಕಾಂಗ್ರೆಸ್ ನ್ನು ಅವ್ಯಕ್ತ ಭಯ, ಉದ್ವೇಗ ಮತ್ತು ಚಿಂತೆಗಳಿಗೆ ಈಡುಮಾಡಿದೆ ಎಂದರೆ ತಪ್ಪಾಗಲಾರದು. ಇದೊಂದು ಸಣ್ಣ ಸಮಸ್ಯೆ ಎಂದು ಕಾಂಗ್ರೆಸ್ ನಾಯಕರು ಮೇಲ್ನೋಟಕ್ಕೆ ಹೇಳುತ್ತಿದ್ದರೂ ಕೂಡ ದೆಹಲಿಯಿಂದಲೇ ಜಾರಕಿಹೊಳಿ ಬ್ರದರ್ಸ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಆಕ್ರೋಶವನ್ನು ಶಮನಗೊಳಿಸಿ ರಾಜಿ ಸಂಧಾನ ಮಾಡಲು ಯತ್ನಿಸುದ್ದಾರೆ. ಲೋಕಸಭೆ ಚುನಾವಣೆಯಿಂದಾಗಿ ಜಾರಕಿಹೊಳಿ ಸೋದರರ ಒತ್ತಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿಯುವ ಸಾಧ್ಯತೆಯಿದೆ.

ಬೆಳಗಾವಿಯ ರಾಜಕೀಯ ಪ್ರಭಾವಿ ಕುಟುಂಬಗಳಿಂದ ನಡೆಯುತ್ತಿವೆ. ಅದರಲ್ಲಿ ಒಬ್ಬ ನಾಯಕ ಹೊರಬಂದರೂ ಕೂಡ ಒಂದಷ್ಟು ಜನ ಕಾರ್ಯಕರ್ತರು ಅವರ ಹಿಂದೆ ಹೋಗುವುದು ಖಂಡಿತ. ಜಾರಕಿಹೊಳಿ ಸೋದರರಲ್ಲಿ ಹಣ, ಜಾತಿ, ಹಣಕಾಸು ಸಂಸ್ಥೆಗಳ ಮೇಲೆ ಹತೋಟಿ, ಸಕ್ಕರೆ ಲಾಬಿ ಎಲ್ಲವೂ ಸೇರಿದೆ ಎನ್ನುತ್ತಾರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ರಾಜಕೀಯ ವಿಶ್ಲೇಷಕ ಡಾ ಹರೀಶ್ ರಾಮಸ್ವಾಮಿ.

ತಮ್ಮನ್ನು ಸಂಪುಟಕ್ಕೆ ಸಚಿವರನ್ನಾಗಿ ಸೇರ್ಪಡೆ ಮಾಡದಿರುವುದಕ್ಕೆ ಈಗಾಗಲೇ ಸತೀಶ್ ಜಾರಕಿಹೊಳಿ ಅಸಮಾಧಾನಗೊಂಡಿದ್ದು ಇನ್ನು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿಗೆ ಸಹ ತಮ್ಮ ಖಾತೆ ಮೇಲೆ ಅಸಮಾಧಾನವಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ವಿವಾದ ಮತ್ತು ಇದರಲ್ಲಿ ಸಚಿವ ಡಿ ಕೆ ಶಿವಕುಮಾರ್ ಮಧ್ಯಪ್ರವೇಶ ಜಾರಕಿಹೊಳಿ ಸೋದರರನ್ನು ಇನ್ನಷ್ಟು ಕೆರಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com