ಕಾಂಗ್ರೆಸ್ ಬಿಕ್ಕಟ್ಟು ಶಮನಕ್ಕೆ ಖುದ್ದು ರಾಹುಲ್ ಗಾಂಧಿ ಪ್ರವೇಶ; ಮೈತ್ರಿ ಸರ್ಕಾರ ಉಳಿಸುವ ಅನಿವಾರ್ಯತೆ

ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಭಿನ್ನಮತವನ್ನು ಶಮನ ಮಾಡಲು ಇದೀಗ ಕಾಂಗ್ರೆಸ್ ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಬೆಂಗಳೂರು/ಬೆಳಗಾವಿ: ರಾಜ್ಯ ಕಾಂಗ್ರೆಸ್ ನೊಳಗಿನ ಆಂತರಿಕ ಭಿನ್ನಮತವನ್ನು ಶಮನ ಮಾಡಲು ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯ ನಾಯಕರು ಸೌಹಾರ್ದಯುತ ಪರಿಹಾರ ಮೂಲಕ ಭಿನ್ನಮತವನ್ನು ಶಮನಗೊಳಿಸಲು ಯತ್ನಿಸುತ್ತಿದ್ದರೂ ಕೂಡ ಮೈತ್ರಿ ಸರ್ಕಾರವನ್ನು ಉಳಿಸಲು ಕಾಂಗ್ರೆಸ್ ಹೈಕಮಾಂಡೇ ಕ್ರಮ ಕೈಗೊಳ್ಳಲು ಮುಂದೆ ಬಂದಿದೆ.

ಬೆಳಗಾವಿಯ ಶಾಸಕ ಸತೀಶ್ ಜಾರಕಿಹೊಳಿಗೆ ದೆಹಲಿಗೆ ಬರುವಂತೆ ನಿನ್ನೆ ರಾಹುಲ್ ಗಾಂಧಿಯವರಿಂದ ಬುಲಾವ್ ಬಂದಿದೆ. ಕೆಲವು ಅತೃಪ್ತ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿಗೆ ಹೋಗದಂತೆ ನಿನ್ನೆ ನಾಯಕರು ಬೆಂಗಳೂರು ಮತ್ತು ದೆಹಲಿಯಲ್ಲಿ ತೀವ್ರ ಪ್ರಯತ್ನ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದೀಗ ಎಲ್ಲ ಕಾಂಗ್ರೆಸ್ ನಾಯಕರ ದೃಷ್ಟಿ ಜಾರಕಿಹೊಳಿ ಬ್ರದರ್ಸ್ ಮೇಲೆ ನೆಟ್ಟಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಬಳಿ ಮಾತನಾಡಿದರೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಸತೀಶ್ ಜಾರಕಿಹೊಳಿಯನ್ನು ದೆಹಲಿಗೆ ಬರುವಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ನಿನ್ನೆ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ನಾನು ಬಹುಶಃ ಬುಧವಾರ ದೆಹಲಿಗೆ ಹೋಗುತ್ತೇನೆ, ಪಕ್ಷದ ಉನ್ನತ ನಾಯಕತ್ವದಲ್ಲಿ ಇರುವ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಲು ದೆಹಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಪಕ್ಷದಲ್ಲಿನ ಗಂಭೀರ ಸಮಸ್ಯೆಗಳನ್ನು ಬಗೆಹರಿಸಲು ಕೊನೆಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನನ್ನನ್ನು ಮಾತುಕತೆಗೆ ಕರೆದಿದ್ದಾರೆ ಎಂದರು.

ರಾಜ್ಯ ರಾಜಕೀಯದ ಬಿಕ್ಕಟ್ಟು ಎಲ್ಲಿಗೆ ಹೋಗಿ ತಲುಪುತ್ತದೆ ಎಂದು ನನಗೆ ಗೊತ್ತಿದೆ. ಹೈಕಮಾಂಡ್ ಗೆ ಅದನ್ನು ವಿವರಿಸುತ್ತೇನೆ. ಆಪರೇಷನ್ ಕಮಲ ಕೂಡ ಬಿಜೆಪಿಯಲ್ಲಿ ನಡೆಯುತ್ತಿದ್ದು ಈ ಬಗ್ಗೆ ಕೂಡ ಚರ್ಚೆ ನಡೆಸುತ್ತೇನೆ, ಬೆಂಗಳೂರಿನಲ್ಲಿ ನಾನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬಿಟ್ಟರೆ ಬೇರೆ ಯಾವ ನಾಯಕರನ್ನು ಕೂಡ ಭೇಟಿ ಮಾಡುವುದಿಲ್ಲ. ನಂತರ ದೆಹಲಿಗೆ ಹೋಗುತ್ತೇನೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
 ಈ ಮಧ್ಯೆ ರಮೇಶ್ ಜಾರಕಿಹೊಳಿ ನಿನ್ನೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ತಮ್ಮ ಬಣದ ಮತ್ತೊಬ್ಬ ಶಾಸಕನಿಗೆ ಸಚಿವ ಹುದ್ದೆ ನೀಡಬೇಕೆಂದು ಮತ್ತು ಡಿ ಕೆ ಶಿವಕುಮಾರ್ ಬೆಳಗಾವಿ ರಾಜಕೀಯದಲ್ಲಿ ಮಧ್ಯೆ ಪ್ರವೇಶಿಸದಂತೆ ನೋಡಿಕೊಳ್ಳಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ ತಾವು ಪಕ್ಷ ತೊರೆಯುವ ಯಾವುದೇ ಅಗತ್ಯವಿಲ್ಲ, ತೊರೆಯುವುದೂ ಇಲ್ಲ ಎಂದಿದ್ದಾರೆ. ಇನ್ನೊಂದೆಡೆ ಸಿಎಂ ಕುಮಾರಸ್ವಾಮಿ ಕೂಡ ಜಾರಕಿಹೊಳಿ ಸೋದರರಾಗಲಿ, ಯಾವ ಶಾಸಕರಾಗಲಿ ಕಾಂಗ್ರೆಸ್ ತೊರೆಯುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com