ವಿಜಯಪುರ: ಜೀವನದಲ್ಲಿ ಒಮ್ಮೆ ಆದರೂ ಸಚಿವನಾಗಬೇಕು ಎಂಬ ಆಸೆ ಇತ್ತು, ಅದರಂತೆ ನಾನು ಮಂತ್ರಿ ಆಗಿದ್ದೇನೆ, ನನ್ನ ಕನಸು ನೆರವೇರಿದೆ, ಪಕ್ಷದ ಒಳಿತಿಗಾಗಿ ನಾನು ನನ್ನ ಸ್ಥಾನಕ್ಕೆ ನಾನು ರಾಜಿನಾಮೆ ನೀಡಲು ಸಿದ್ಧವಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಇರುವಷ್ಟರಲ್ಲಿ ಏನು ಸೇವೆ ಮಾಡುತ್ತೇವೆ ಅದು ಮುಖ್ಯ ಎಂದಿದ್ದಾರೆ. ಅಲ್ಲದೆ ನಾನು ಆಪರೇಷನ್ ಕಮಲದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಐದು ವರ್ಷ ಆಡಳಿತ ನಡೆಸುತ್ತೆ. ಮಾಧ್ಯಮಗಳಲ್ಲಿ ಸರ್ಕಾರ ಬಿಳುತ್ತೆ ಅಂತ ಹೇಳುತ್ತಿದ್ದಾರೆ. ಆದರೆ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನಾನು 100 ದಿನ ಅಧಿಕಾರ ಪೂರೈಸಿದ್ದೇನೆ, ನಾನು ರಾಜಕೀಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಇಲಾಖೆಯಲ್ಲಿ ಕೆಲಸ ಮಾಡುವುದಷ್ಟೇ ನನ್ನ ಆದ್ಯತೆ. ಒಂದು ವೇಳೇ ಹೈಕಮಾಂಡ್ ಸೂಚಿಸಿದ್ರೆ ಯಾವುದೇ ತಕರಾರಿಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.