'ಕೈ' ವಿರೋಧದ ನಡುವೆಯೂ ಡಾ. ಉಮೇಶ್ ಜಾದವ್ ರಾಜೀನಾಮೆ ಅಂಗೀಕಾರ!

ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸೆಣೆಸುವ ಸಲುವಾಗಿ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಚಿಂಚೋಳಿ ಶಾಸಕ ಶಾಸಕ ಡಾ. ಉಮೇಶ್ ಜಾಧವ್ ಅವರ ರಾಜೀನಾಮೆ...
ಡಾ. ಉಮೇಶ್ ಜಾಧವ್-ಮಲ್ಲಿಕಾರ್ಜುನ್ ಖರ್ಗೆ
ಡಾ. ಉಮೇಶ್ ಜಾಧವ್-ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿದಿರುವ ಉಮೇಶ್ ಜಾಧವ್ ಅವರು ವಿಧಾನಸಭೆ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು ಸಭಾಧ್ಯಕ್ಷ ರಮೇಶ್ ಕುಮಾರ್ ಅಂಗೀಕರಿಸಿದ್ದಾರೆ. ಇದರಿಂದಾಗಿ ಖರ್ಗೆ ವಿರುದ್ಧದ ಸ್ಪರ್ಧೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದ್ದು, ಜಾಧವ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ

ಜಾಧವ್ ಅವರು ಯಾವುದೇ ಒತ್ತಡಕ್ಕೆ ಮಣಿಯದೇ ಆಮಿಷಗಳಿಗೆ ಬಲಿಯಾಗದೇ ಸ್ವಯಂಪ್ರೇರಿತರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಂವಿಧಾನದ ಅನುಚ್ಛೇದ 190(3) ರಲ್ಲಿ ಸಭಾಧ್ಯಕ್ಷರು ಅನುಸರಿಸಬಹುದಾದ ಕ್ರಮಗಳ ಬಗ್ಗೆ ವಿವರಿಸಲಾಗಿದ್ದು, ಅದರಂತೆ ವಿಧಾನಸಭೆ ಸದಸ್ಯ ಸ್ಥಾನಕ್ಕೆ ಅವರು ನೀಡಿರುವ ರಾಜೀನಾಮೆಯನ್ನು ತಮ್ಮ ನ್ಯಾಯಿಕ ಪ್ರಜ್ಞೆ ಮೇರೆಗೆ ಅಂಗೀಕರಿಸಿರುವುದಾಗಿ ಸ್ಪೀಕರ್ ಹೇಳಿದ್ದಾರೆ.

ರಾಜೀನಾಮೆ ಪತ್ರ ನೀಡುವ ಮೊದಲೇ ಇವರನ್ನು ವಿಧಾನಸಭೆ  ಸದಸ್ಯತ್ವದಿಂದ ಅನರ್ಹಗೊಳಿಸಸುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭಾಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ನಾಯಕರು ಸಲ್ಲಿಸಿದ್ದ ಅರ್ಜಿಯನ್ನು ಅನುಸರಿಸಿ ಜಾಧವ್ ಅವರಿಗೆ ಸ್ಪೀಕರ್ ಸ್ಪಷ್ಟೀಕರಣ ಕೇಳಿದ್ದು, ಅವರು ತಮ್ಮ ವಕೀಲರ ಮೂಲಕ ಸ್ಪೀಕರ್ ಅವರಿಗೆ ಸಮಜಾಯಿಷಿ ನೀಡಿದ್ದರು. ಜಾಧವ್ ಅವರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ಸಲ್ಲಿಸಿದ್ದ ಅನರ್ಹತೆ ಅರ್ಜಿಗೆ ನೀಡಿದ ಉತ್ತರಕ್ಕೂ ತಮ್ಮ ಕಾರ್ಯಾಲದಿಂದ ರಾಜೀನಾಮೆ ಪತ್ರಕ್ಕೆ ಸಂಬಂಧಿಸಿದಂತೆ ನೀಡಿದ್ದ ಸೂಚನಾ ಪತ್ರಕ್ಕೂ ನೀಡಿರುವ ಉತ್ತರಕ್ಕೂ ಸಾಮ್ಯತೆ ಇರಲಿಲ್ಲ. ಬಳಿಕ ಜಾಧವ್ ಅವರು ತಮ್ಮ ಸೂಚನೆಯಂತೆ ದೃಢೀಕರಣ ಪತ್ರದೊಂದಿಗೆ  ಪೂರ್ಣಪ್ರಮಾಣದ ಸಮಜಾಯಿಷಿ ನೀಡಿದ್ದಾರೆ ಎಂದು ಸ್ಪೀಕರ್ ತಿಳಿಸಿದ್ದಾರೆ.

ಮಾ.25 ರಂದು ಸಭಾಧ್ಯಕ್ಷರ ನೇತೃತ್ವದಲ್ಲಿ ಚಿಂಚೋಳಿ ಮತಕ್ಷೇತ್ರದ ಮನವಿದಾರರು, ಅನರ್ಹತೆ ಅರ್ಜಿದಾರರ ಪರ ವಕೀಲರಿಗೂ ಹಾಗೂ ಉಮೇಶ್ ಜಾಧವ್ ಅವರ ವಕೀಲರ ನಡುವೆ  ವಾದಪ್ರತಿವಾದ ನಡೆದಿತ್ತು. ಕಾಂಗ್ರೆಸ್ ಪರ ವಕೀಲರಾದ ಶಶಿಕಿರಣ್ ಅವರು ಅನರ್ಹತೆ ಅರ್ಜಿ ಇತ್ಯರ್ಥ ಆಗುವವರೆಗೆ ರಾಜೀನಾಮೆ ಅಂಗೀಕಾರ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕೆಂದು ವಾದ ಮಂಡಿಸಿದ್ದರು. ಜಾಧವ್ ಪರ ವಕೀಲ ಸಂದೀಪ್ ಪಾಟೀಲ್, ಜಾಧವ್ ಅವರು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರುವುದರಿಂದ ಹಾಗೂ ವಿಚಾರವನ್ನು ಪೂರ್ಣ ಪ್ರಮಾಣದಲ್ಲಿ ದೃಢೀಕರಿಸಿದ ಕಾರಣ ಅನರ್ಹತೆಗೊಳಿಸುವ ಅರ್ಜಿಯು ನಿರರ್ಥಕವಾಗುವ ಸಂಭವ ಇರುವುದರಿಂದ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಪ್ರತಿವಾದ ಮಂಡಿಸಿದ್ದರು.

 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕೆಲವು ಮತದಾರರು, ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ರಾಜೀನಾಮೆ ಕ್ರಮ ಸಾಧುವಲ್ಲ. ರಾಜೀನಾಮೆ ವಿಚಾರ ನ್ಯಾಯಸಮ್ಮತವಾದುದಲ್ಲ ಹಾಗೂ ಪ್ರಜಾವಿರೋಧಿ ನೀತಿ ಎಂದು ಮನವಿ ಮಾಡಿದ್ದರು.
ವಾದಪ್ರತಿವಾದವನ್ನು ಆಲಿಸಿದ್ದ ಸ್ಪೀಕರ್ , ಉಮೇಶ್ ಜಾಧವ್ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ತೊಂದರೆಯಿಲ್ಲ ಎಂದು ರಾಜೀನಾಮೆ ವಿಚಾರದ ತೀರ್ಪನ್ನು ಕಾಯ್ದಿರಿಸಿದ್ದರು.
 
ಸೋಮವಾರ ತಮ್ಮ ತೀರ್ಪನ್ನು ಪ್ರಕಟಿಸಿರುವ ರಮೇಶ್ ಕುಮಾರ್, ಜಾಧವ್ ತಮ್ಮ ಸ್ವ-ಇಚ್ಛೆಯಿಂದ ಶಾಸನ ಸಭೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಅದನ್ನು ಪುರಸ್ಕರಿಸಲಾಗಿದೆ ಎಂದಿದ್ದಾರೆ.
ಮಾ.4 ರಂದು ಸ್ಪೀಕರ್ ಅವರ ಸ್ವಗ್ರಾಮಕ್ಕೆ ತೆರಳಿ ಜಾಧವ್ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆಗೆ ಕಾರಣಗಳನ್ನು ಕೇಳಿ ಸ್ಪೀಕರ್ ಉಮೇಶ್ ಜಾಧವ್ ಅವರಿಗೆ ಪತ್ರ ಬರೆದಿದ್ದರು. ಶಾಸಕಾಂಗ ನಾಯಕ ಸಿದ್ದರಾಮಯ್ಯ ಜಾಧವ್ ವಿರುದ್ಧ ವಿಪ್ ಉಲ್ಲಂಘನೆ ದೂರನ್ನು ಸ್ಪೀಕರ್ ಅವರಿಗೆ ನೀಡಿದ್ದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಉಮೇಶ್ ಜಾಧವ್, ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಣಕ್ಕಿಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com